ಹಿಂದುತ್ವವು ಹಿಂದೂ ಧರ್ಮವನ್ನು ವಿರೂಪಗೊಳಿಸುತ್ತಿದೆ: ಸೆಹಗಲ್

ಡೆಹ್ರಾಡೂನ್, ಎ.25: ಹಿಂದುತ್ವವೆಂಬುದು ಮೂಲಭೂತ ವಾದದ ಒಂದು ಬ್ರಾಂಡ್ ಆಗಿದೆ. ಹಿಂದೂ ಬಲ ಪಂಥವು ಹಿಂದೂ ಧರ್ಮದ ವಾಸ್ತವ ಸಿದ್ಧಾಂತವನ್ನು ವಿರೂಪಗೊಳಿಸುತ್ತಿದೆಯೆಂದು ಖ್ಯಾತ ಲೇಖಕಿ ನಯನತಾರಾ ಸೆಹಗಲ್ ಆರೋಪಿಸಿದ್ದಾರೆ. ದೇಶದಲ್ಲಿ ಅಸಹಿಷ್ಣುತೆಯನ್ನು ಪ್ರತಿಭಟಿಸಿ, ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಹಿಂದಿರುಗಿಸಿದವರಲ್ಲಿ ಅವರೂ ಸೇರಿದ್ದಾರೆ.
ದೇಶದ ಪರಿಸ್ಥಿತಿಯೂ ತುರ್ತು ಪರಿಸ್ಥಿತಿಯ ಕಾಲಕ್ಕಿಂತಲೂ ಕೆಟ್ಟದಾಗಿದೆ. ಆದರೆ, ಜೆಎನ್‌ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾ ಕುಮಾರ್‌ರಂತಹ ವ್ಯಕ್ತಿಗಳು ಆಶಾವಾದ ಚಿಗುರಿಸಿದ್ದಾರೆಂದು ಸೆಹಗಲ್ ಹೇಳಿದ್ದಾರೆ.
ಮೊದಲ ಡೆಹ್ರಾಡೂನ್ ಸಾಹಿತ್ಯೋತ್ಸವದ ಪಾರ್ಶ್ವದಲ್ಲಿ ಐಎಎನ್‌ಎಸ್‌ನೊಂದಿಗೆ ಮಾತನಾಡಿದ ಅವರು, ಹಿಂದೂ ಬಲ ಪಂಥವು ಐಸಿಸ್ ಭಯೋತ್ಪಾದಕ ಸಂಘಟನೆಯಂತೆ ಕಾಣಿಸತೊಡಗಿದೆಯೆಂದು ಆರೋಪಿಸಿದರು. ಹಿಂದುತ್ವವು ಜನರ ತಲೆಗಳನ್ನು ಕಡಿಯಲು ಐಸಿಸ್‌ನಂತಾಗುತ್ತಿದೆಯೆಂಬ ಕುರಿತು ಚರ್ಚೆ ನಡೆಸುವುದು ಅಗತ್ಯವಾಗಿದೆ. ಹಿಂದೂ ಬಲ ಪಂಥವು ಐಸಿಸ್ ಕ್ರಿಮಿನಲ್ ಭಾಷೆಯನ್ನೇ ಆಡುತ್ತಿದೆ. ಹಿಂದೂ ಧರ್ಮಕ್ಕೆ ಹಿಂದುತ್ವವು ಏನು ಮಾಡುತ್ತಿದೆಯೋ ಆ ಬಗ್ಗೆ ತನಗೆ ಒಬ್ಬಳು ಹಿಂದೂವಾಗಿ ವಿಷಾದವಿದೆ. ಅವರದನ್ನು ವಿರೂಪ ಹಾಗೂ ವಿನಾಶಗೊಳಿಸುತ್ತಿದ್ದಾರೆಂದು ಸೆಹಗಲ್ ದೂರಿದರು.
ರಾಷ್ಟ್ರೀಯವಾದದ ಕುರಿತು ಚರ್ಚೆಯನ್ನು ‘ಬೋಗಸ್‘ ಎಂದು ವ್ಯಾಖ್ಯಾನಿಸಿದ ಅವರು, ಸ್ವತಂತ್ರ ರಾಷ್ಟ್ರವಾಗಲು ದೇಶವು ಹೋರಾಡುತ್ತಿದ್ದ ವೇಳೆ ರಾಷ್ಟ್ರೀಯವಾದ ಅಗತ್ಯವಿತ್ತು. ಆಗ ಹಿಂದೂ ಹಾಗೂ ಮುಸ್ಲಿಂ ಬಲ ಪಂಥೀಯರು. ದೇಶ ವಿಭಜನೆಯ ದಾರಿ ಮಾಡಲು ಬ್ರಿಟಿಶರಿಗೆ ನೆರವಾಗಿದ್ದರೆಂದು ಸೆಹಗಲ್ ಹೇಳಿದರು.
ಹಿಂದೂ ಬಲಪಂಥೀಯ ಗುಂಪುಗಳು ಎನ್‌ಐಟಿ ಕಾಶ್ಮೀರ ಕ್ಯಾಂಪಸ್‌ನಲ್ಲಿ ಅಶಾಂತಿಯನ್ನು ಹರಡುತ್ತಿವೆಯೆಂದು ಆರೋಪಿಸಿದ ಅವರು, ಭಾರತೀಯ ಜನ ಸಂಘದ ಸ್ಥಾಪಕ ಶ್ಯಾಂಪ್ರಸಾದ್ ಮುಖರ್ಜಿಯವರ ಕಾಲದಲ್ಲೇ ಈ ಪ್ರಯತ್ನ ಆರಂಭವಾಗಿತ್ತು ಎಂದರು. ಅದು ಈಗಲೂ ಮುಂದುವರಿದಿದ್ದು, ಬಿಜೆಪಿ ಕಾಶ್ಮೀರದಲ್ಲಿ ಜಾತ್ಯತೀತತೆಯನ್ನು ನಾಶಗೊಳಿಸಲು ಬಯಸಿದೆ. ಕಾಶ್ಮೀರವು ಭಾರತದಲ್ಲಿನ ಏಕೈಕ ಜಾತ್ಯತೀತ ಸ್ಥಳವಾಗಿದೆ. ಅಲ್ಲಿ ದೇಶ ವಿಭಜನೆಯ ವೇಳೆಯೂ ದಂಗೆ ನಡೆದಿರಲಿಲ್ಲ. ಅದು ಮಹಾನ್ ಧಾರ್ಮಿಕ ಸಂಸ್ಕೃತಿಯ ಕೇಂದ್ರವಾಗಿದೆಯೆಂದು ಸೆಹಗಲ್ ಪ್ರತಿಪಾದಿಸಿದರು.







