ಪ್ರಕರಣದ ವಿಚಾರಣೆಯ ವೇಳೆ ನ್ಯಾಯಾಧೀಶರ ಟೀಕೆ ಸಲ್ಲ: ಮೇಘ್ವಾಲ್
ಹೊಸದಿಲ್ಲಿ, ಎ.25: ಪ್ರಕರಣವೊಂದರ ವಿಚಾರಣೆಯ ವೇಳೆ ನ್ಯಾಯಾಧೀಶರು ಟೀಕೆಗಳನ್ನು ಮಾಡುವುದಕ್ಕೆ ನಿಷೇಧ ಹೇರುವಂತೆ ಬಿಜೆಪಿ ಸದಸ್ಯರೊಬ್ಬರು ಸೋಮವಾರ ಆಗ್ರಹಿಸಿದ್ದಾರೆ.
ಬಿಜೆಪಿ ಸಂಸದ ಹಾಗೂ ಪಕ್ಷದ ಮುಖ್ಯ ಸಚೇತಕ ಅರ್ಜುನ್ ರಾಮ್ ಮೇಘ್ವಾಲ್ ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು.
ಸಾಂವಿಧಾನಿಕ ಹುದ್ದೆಗಳಲ್ಲಿರುವ ಜನರ ವಿರುದ್ಧ ಪ್ರಕರಣದ ವಿಚಾರಣೆಯ ವೇಳೆಯೇ ನ್ಯಾಯಾಧೀಶರು ‘ವೀಕ್ಷಕ ವಿವರಣೆ’ ನೀಡುವುದು ಒಳ್ಳೆಯದಲ್ಲ. ಅದನ್ನು ನಿಲ್ಲಿಸಬೇಕು. ಅದಕ್ಕೆ ಸಂಸತ್ತು ಪ್ರಸ್ತಾಪಗಳನ್ನು ಮಾಡಬೇಕೆಂದು ಅವರು ಹೇಳಿದರು.
ಕೆಲವು ವಿಪಕ್ಷ ಸದಸ್ಯರು ಅದನ್ನು ವಿರೋಧಿಸಿದಾಗ, ಈ ವಿಷಯದಲ್ಲಿ ತಾನು ರಾಜಕೀಯ ಮಾಡುತ್ತಿಲ್ಲ. ಈ ಬಗ್ಗೆ ಯಾರೂ ರಾಜಕೀಯ ಮಾಡಬಾರದೆಂದು ಮೇಘ್ವಾಲ್ ಮನವಿ ಮಾಡಿದರು.
ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯ ಪ್ರಕರಣದ ವಿಚಾರಣೆಯ ವೇಳೆ. ರಾಜ್ಯದ ಹೈಕೋರ್ಟ್ ರಾಷ್ಟ್ರಪತಿಯೆಂದರೆ ಅನುಲ್ಲಂಘನೀಯ ಅರಸನಲ್ಲ. ರಾಷ್ಟ್ರಪತಿಯೂ ತಪ್ಪು ಮಾಡಬಹುದು. ಸಂಪೂರ್ಣ ಅಧಿಕಾರ ಯಾರ ಮನಸ್ಸನ್ನೂ ಕೆಡಿಸಬಹುದು. ಯಾವುದೇ ಆದೇಶವಾದರೂ, ನ್ಯಾಯಾಂಗ ವೌಲ್ಯಮಾಪನಕ್ಕೆ ಹೊರತಾಗಿಲ್ಲವೆಂಬಿತ್ಯಾದಿ ಟೀಕೆಗಳನ್ನು ಮಾಡಿತ್ತು.







