ಚೀನಾದ ಹಾಲು, ಕೆಲವು ಮೊಬೈಲ್ ಫೋನ್‌ಗಳ ಆಮದಿಗೆ ನಿಷೇಧ

ಹೊಸದಿಲ್ಲಿ, ಎ.25: ಕಳಪೆ ಗುಣಮಟ್ಟ ಕ್ಕಾಗಿ ಅಥವಾ ಸುರಕ್ಷಾ ಸಂಹಿತೆಗಳನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ ಚೀನಾದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳು,ಕೆಲವು ಮೊಬೈಲ್ ಫೋನ್‌ಗಳು ಮತ್ತು ಇತರ ಕೆಲವು ಸರಕುಗಳ ಆಮದನ್ನು ಭಾರತವು ನಿಷೇಧಿಸಿದೆ ಎಂದು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಲೋಕಸಭೆಯಲ್ಲಿ ತಿಳಿಸಿದರು.
ಚೀನಾದಿಂದ ಆಮದು ಹಾಲು ಮತ್ತು ಹಾಲಿನ ಉತ್ಪನ್ನಗಳು ಕಳಪೆ ಗುಣಮಟ್ಟದ್ದಾಗಿದ್ದು, ಕೆಲವು ಮೊಬೈಲ್ ಫೋನ್‌ಗಳು ಐಎಂಎಸ್‌ಇಐ ಸಂಖ್ಯೆ ಮತ್ತು ಇತರ ಕೆಲವು ಭದ್ರತಾ ಅಂಶಗಳನ್ನು ಹೊಂದಿಲ್ಲ. ಕೆಲವು ಉಕ್ಕು ಉತ್ಪಾದನೆಗಳ ಆಮದನ್ನೂ ನಿಷೇಧಿಸಲಾಗಿದೆ ಎಂದ ಅವರು, ನಾವು ರಾಜತಾಂತ್ರಿಕ,ಪ್ರಾದೇಶಿಕ ಅಥವಾ ಮಿಲಿಟರಿ ಸಮಸ್ಯೆಗಳನ್ನು ಹೊಂದಿದ್ದರೂ ಜಾಗತಿಕ ವಾಣಿಜ್ಯ ಸಂಘಟನೆ(ಡಬ್ಲೂಟಿಒ)ಯ ನಿಯಮಗಳಿಂದಾಗಿ ಯಾವುದೇ ರಾಷ್ಟ್ರದಿಂದ ಆಮದನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ ಎಂದರು.
ಚೀನಾದ ಭಿನ್ನಮತೀಯ ಇಸಾಗೆ ವೀಸಾ ರದ್ದುಗೊಳಿಸಿದ ಭಾರತ
ಹೊಸದಿಲ್ಲಿ, ಎ.25: ಚೀನಾದ ಆಕ್ಷೇಪಕ್ಕೆ ಮಣಿದಂತಿರುವ ಭಾರತವು ಧರ್ಮಶಾಲಾದಲ್ಲಿ ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲು ಆ ರಾಷ್ಟ್ರದ ಭಿನ್ನಮತೀಯ ಪ್ರಮುಖ ದೋಲ್ಕುನ್ ಇಸಾಗೆ ನೀಡಿದ್ದ ವೀಸಾ ರದ್ದುಗೊಳಿಸಿದೆ.
ಇಸಾಗೆ ನೀಡಿದ್ದ ವೀಸಾವನ್ನು ನಾವು ರದ್ದುಗೊಳಿಸಿದ್ದೇವೆ ಎಂದು ಗೃಹ ಸಚಿವಾಲಯದ ವಕ್ತಾರರು ಸೋಮವಾರ ತಿಳಿಸಿದರು. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಅವರು ನೀಡಲಿಲ್ಲ.
ಜರ್ಮನಿಯಲ್ಲಿ ವಾಸವಾಗಿರುವ,ವಿಶ್ವ ಉಯ್ಘರ್ ಕಾಂಗ್ರೆಸ್(ಡಬ್ಲೂಯುಸಿ)ನ ನಾಯಕರಾಗಿರುವ ಇಸಾ ಅವರನ್ನು ಅಮೆರಿಕದ ‘ಇನಿಷಿಯೇಟಿವ್ಸ್ ಫಾರ್ ಚೈನಾ’ ಧರ್ಮಶಾಲಾದಲ್ಲಿ ಆಯೋಜಿಸಿರುವ ಸಮ್ಮೇಳನಕ್ಕೆ ಆಹ್ವಾನಿಸಲಾಗಿತ್ತು. ಭಾರತದ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಇಸಾ,ವೀಸಾ ರದ್ದುಗೊಂಡಿದೆ ಎಂಬ ಮಾಹಿತಿಯನ್ನು ತನಗೆ ಎ.23ರಂದು ನೀಡಲಾಗಿದ್ದು,ಅದರಲ್ಲಿ ಯಾವುದೇ ವಿವರಗಳಿರಲಿಲ್ಲ. ಬಹುಶಃ ಭಾರತ ಸರಕಾರವು ಚೀನಾದ ಒತ್ತಡಕ್ಕೆ ಮಣಿದಿರಬಹುದು ಎಂದು ಹೇಳಿದ್ದಾರೆ.
ಮುಸ್ಲಿಮ ಬಾಹುಳ್ಯದ ತನ್ನ ಝಿಂಜಿಯಾಂಗ್ ಪ್ರಾಂತ್ಯದಲ್ಲಿ ಭಯೋತ್ಪಾದನೆಗೆ ಡಬ್ಲೂಯುಸಿ ನಾಯಕರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಚೀನಾ ಪರಿಗಣಿಸಿದ್ದು, ಪಠಾಣಕೋಟ್ ಭಯೋತ್ಪಾದಕ ದಾಳಿಯ ರೂವಾರಿ ಅಜರ್ ಮಸೂದನನ್ನು ವಿಶ್ವಸಂಸ್ಥೆಯಿಂದ ಭಯೋತ್ಪಾದಕನೆಂದು ಘೋಷಿಸುವ ತನ್ನ ಪ್ರಯತ್ನಕ್ಕೆ ಚೀನಾ ಅಡ್ಡಗಾಲಿಟ್ಟ ಹಿನ್ನೆಲೆಯಲ್ಲಿ ಇಸಾಗೆ ವೀಸಾ ನೀಡಲು ಭಾರತವು ನಿರ್ಧರಿಸಿತ್ತು.
ಇಸಾಗೆ ವೀಸಾ ನೀಡಿದ್ದಕ್ಕಾಗಿ ಚೀನಾ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತ್ತು.







