ಅಥ್ಲೀಟ್‌ಗಳು ಒಲಿಂಪಿಕ್ಸ್ ಅರ್ಹತೆಗೆ ಅಡ್ಡಿಯಾದ ವಿದ್ಯುತ್ ವೈಫಲ್ಯ
ಹೊಸದಿಲ್ಲಿ, ಎ.25: ಭಾರತದ ಕ್ರೀಡಾ ಸಂಸ್ಥೆಗಳ ದಿವ್ಯ ನಿರ್ಲಕ್ಷ, ಹಾಗೂ ವಿದ್ಯುತ್ ವೈಫಲ್ಯದಿಂದಾಗಿ ದೇಶದ ಓಟಗಾರ್ತಿಯರು ಮುಂಬರುವ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಸಾಧ್ಯವಾಗದ ವಿದ್ಯಮಾನ ವರದಿಯಾಗಿದೆ.
ಆಗಸ್ಟ್‌ನಲ್ಲಿ ನಡೆಯಲಿರುವ ರಿಯೋ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಅರ್ಹತೆ ಗಿಟ್ಟಿಸಲು ಇಲ್ಲಿನ ಜವಾಹರ್‌ಲಾಲ್ ನೆಹರೂ ಸ್ಟೇಡಿಯಂನಲ್ಲಿ ರವಿವಾರ ಇಂಡಿಯನ್ ಗ್ರಾನ್ ಪ್ರಿಯನ್ನು ಆಯೋಜಿಸಲಾಗಿತ್ತು.
ಟೂರ್ನಿಯು ಆರಂಭವಾದ ತಕ್ಷಣವೇ ವಿದ್ಯುತ್ ಕೈಕೊಟ್ಟಿತು. ಸ್ಟೇಡಿಯಂನಲ್ಲಿ 10 ಜನರೇಟರ್‌ಗಳ ವ್ಯವಸ್ಥೆ ಇದ್ದರೂ, ರವಿವಾರವಾದ ಕಾರಣ ಅದನ್ನು ಆಪರೇಟ್ ಮಾಡುವ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಕರೆಂಟ್ ಇಲ್ಲದೆಯೇ ಟೂರ್ನಿಯು ಮುಂದುವರಿದಿದ್ದು, ಓಟಗಾರರು ಗುರಿ ತಲುಪಿದ ಸಮಯವನ್ನು ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.
ಆದರೆ, ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಅಸೋಸಿಯೇಶನ್ ಇದು ಪರಿಗಣಿಸುವ ಸಾಧ್ಯತೆಯಿಲ್ಲ. ಸಂಸ್ಥೆಯು ಇಲೆಕ್ಟ್ರಾನಿಕ್ ಟೈಮ್‌ನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಟೂರ್ನಿಯಲ್ಲಿ ವಿದ್ಯುತ್ ವೈಫಲ್ಯದ ಬಗ್ಗೆ ಸಾಯ್ ಹಾಗೂ ದಿಲ್ಲಿ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಗಳು ತಮ್ಮೆಳಗೆ ಆರೋಪ-ಪ್ರತ್ಯಾರೋಪ ಮಾಡುವುದರಲ್ಲಿ ನಿರತವಾಗಿವೆ.
ಮತ್ತೊಂದೆಡೆ, ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ವಿಶ್ವಾಸದಲ್ಲಿದ್ದ ಒಡಿಶಾದ ಓಟಗಾರ್ತಿ ಸೃಬಾನಿ ನಂದಾ, ಅಮಿಯಾ ಮಲಿಕ್, ಕೇರಳ ಅಥ್ಲೀಟ್ ಮುಹಮ್ಮದ್ ಅನಸ್ ಅರ್ಹತಾ ಸುತ್ತಿನಲ್ಲಿ ರಾಷ್ಟ್ರೀಯ ದಾಖಲೆಯನ್ನು ಮುರಿದು ಒಲಿಂಪಿಕ್ಸ್ ಅರ್ಹತೆಯ ಮಾರ್ಕನ್ನು ತಲುಪಿದ್ದರೂ ಐಎಎಎಫ್ ಅಥ್ಲೀಟ್‌ಗಳು ಈ ಸಾಧನೆಯನ್ನು ಪರಿಗಣಿಸುವ ಸಾಧ್ಯತೆಯಿಲ್ಲ.







