ಆಹಾರ ಗಂಟಲಲ್ಲಿ ಸಿಲುಕಿ ವೈದ್ಯೆ ಸಾವು

ತೃಶೂರ್, ಎ. 26: ಆಹಾರ ಗಂಟಲಲ್ಲಿ ಸಿಲುಕಿ ವೈದ್ಯೆಯೊಬ್ಬರು ಸಾವನ್ನಪ್ಪಿದ ಆಘಾತಕಾರಿ ಘಟನೆ ನಗರದಲ್ಲಿ ಸಂಭವಿಸಿದೆ.
ಪಡಿಞ್ಞಿರೆಕ್ಕೋಟ್ಟ ಸರಕಾರಿ ಮಾನಸಿಕ ಆರೋಗ್ಯ ಕೇಂದ್ರದ ಡಾ.ಲಕ್ಷ್ಮಿ ಎಂ. ಮೋಹನ್ (29) ಸಾವನ್ನಪ್ಪಿದ ವೈದ್ಯೆ.
ಇವರು ನಗರದ ಪ್ರಮುಖ ಮಾಲ್ ಒಂದರಲ್ಲಿ ಆಹಾರ ಸೇವಿಸುತ್ತಿದ್ದಾಗ ಆಹಾರ ಗಂಟಲಲ್ಲಿ ಸಿಲುಕಿದೆ. ಕೂಡಲೆ ಅವರು ವಾಷ್‌ಬೇಸಿನ್ ಬಳಿ ಧಾವಿಸಿದ್ದು, ಅಲ್ಲಿ ಕುಸಿದು ಬಿದ್ದಿದ್ದಾರೆ.
25 ನಿಮಿಷಗಳ ಬಳಿಕ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು.
ಆಹಾರ ಸೇವಿಸುವಾಗ ಕೆಮ್ಮಿದ್ದೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ. ಮಾಲ್‌ನ ಮೂರನೆ ಮಹಡಿಯಲ್ಲಿ ಘಟನೆ ನಡೆದಿದ್ದು, ಲಿಫ್ಟ್ ತೀವ್ರ ಕಾರ್ಯನಿರತವಾಗಿದ್ದರಿಂದ ಲಕ್ಷ್ಮೀ ಅವರನ್ನು ಕೆಳಗೆ ತರಲು ತಡವಾಯಿತು. ಅಲ್ಲದೆ ಆಸ್ಪತ್ರೆಗೆ ಕರೆದೊಯ್ಯಲು ವಾಹನ ಸಿಗಲಿಲ್ಲ. ಕೊನೆಗೆ ಆಟೊದಲ್ಲಿ ಎರಡು ಕಿ.ಮೀ. ದೂರವಿರುವ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು ಎನ್ನಲಾಗಿದೆ.
ನೋಡಿ ನಿಂತರು: ಡಾ.ಲಕ್ಷ್ಮೀ ಮಾಲ್‌ನಲ್ಲಿ ಅಸ್ವಸ್ಥಗೊಂಡಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲು ಯಾರೂ ಮುಂದೆ ಬರಲಿಲ್ಲ. ವಾಹನವಿದ್ದವರೂ ಕೇವಲ ನೋಡಿ ನಿಂತರು ಎಂಬ ಆರೋಪ ಕೇಳಿಬಂದಿದೆ.
ಡಾ.ಲಕ್ಷ್ಮೀ ನಿಲಂಬೂರ್ ನಿವಾಸಿ, ಧನಲಕ್ಷ್ಮೀ ಬ್ಯಾಂಕ್‌ನ ಚಾರ್ಟರ್ಡ್ ಅಕೌಂಟೆಂಟ್ ಸಿದ್ದಾರ್ಥ್ ಪಿ. ನಾಯರ್‌ರ ಪತ್ನಿ.





