ಕಾರು ತಾಗಿದ್ದಕ್ಕೆ ಬಸ್ಕಿ ತೆಗೆಸಿ ಜೀವವನ್ನೇ ತೆಗೆದರು !
ಅಮಾನವೀಯತೆಯ ಪರಮಾವಧಿ

ಸೆಕುಂದರಾಬಾದ್, ಎ. 26 : ಕಾರೊಂದು ತಮಗೆ ಗುದ್ದಿದ್ದಕ್ಕೆ ಸಿಟ್ಟಾದ ನಾಲ್ಕು ಮಂದಿ ಯುವಕರು 40 ವರ್ಷದ ಕಾರು ಚಾಲಕನನ್ನು ಕಾರಿನಿಂದ ಹೊರಗೆಳೆದು ಬಲವಂತವಾಗಿ ಬಿಸಿಲಿನ ಝಳದಲ್ಲಿ ಬಸ್ಕಿ ತೆಗೆಸಿದ ಪರಿಣಾಮ ಆತ ಅಲ್ಲೇ ಕುಸಿದು ಬಿದ್ದು ಮೃತ ಪಟ್ಟ ಘಟನೆ ಸೆಕುಂದರಾಬಾದ್ ನ ಬೋವೆನ್ ಪಳ್ಳಿಯಿಂದ ವರದಿಯಾಗಿದೆ.
ಕಾರು ಚಾಲಕ ಬಹಳ ಹೊತ್ತು ಕಾರಿನಲ್ಲೇ ಇರುವುದನ್ನು ಗಮನಿಸಿದ ಪೊಲೀಸರು ಕಾರಿನೊಳಗೆ ಇಣುಕಿದಾಗ ಚಾಲಕ ಮೃತ ಪಟ್ಟಿದ್ದು ತಿಳಿದು ಬಂದಿತ್ತು. ಆದರೆ ಪ್ರಾಥಮಿಕವಾಗಿ ಪೊಲೀಸರು ಇದೊಂದು ಬಿಸಿಲಿನ ಧಗೆಯಿಂದಾದ ಸಾವೆಂದು ತಿಳಿದು ಕೊಂಡರೂ ಆತ ಅಷ್ಟು ಹೊತ್ತು ಕಾರಿನೊಳಗೆ ಕುಳಿತುಕೊಂಡಿದ್ದೇಕೆಂದು ಪರಿಶೀಲಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದಾಗಲಷ್ಟೇ ನಿಜ ಸಂಗತಿ ಬೆಳಕಿಗೆ ಬಂದಿತ್ತು.
ಚಾಲಕನ ಪರ್ಸನ್ನು ಕಸಿದು ಆರೋಪಿಗಳು ಪರಾರಿಯಾಗುತ್ತಿರುವ ದೃಶ್ಯವೂ ಸಿಸಿಟಿವಿಯಲ್ಲಿ ದಾಖಲಾಗಿದೆ. ಮೂವರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು ನಾಲ್ಕನೆಯವನಿಗಾಗಿ ಹುಡುಕುತ್ತಿದ್ದಾರೆ.

Next Story





