ಭಿಕ್ಷೆ ಬೇಡಿ, ಕಳ್ಳತನಕ್ಕೆ ಇಳಿದಿದ್ದ ನಟಿ ಪತ್ತೆ
ಬಣ್ಣದ ಬದುಕಿನ ಹಿಂದಿನ ಸತ್ಯ

ಮುಂಬೈ, ಎ. 26 : ಕೈಯಲ್ಲಿ ಯಾವುದೇ ಕೆಲಸವಿಲ್ಲದೆ ಅಲೆಮಾರಿಯಂತಾಗಿ ಹೋದ ನಟಿಯೊಬ್ಬಳು ಲೋಖಂಡ್ವಾಲದ ರಸ್ತೆಗಳಲ್ಲಿ ಭಿಕ್ಷೆ ಬೇಡಿ, ಕಳ್ಳತನ ಮಾಡುತ್ತಿರುವುದು ಪತ್ತೆಯಾಗಿದ್ದು ಮಾನಸಿಕ ಸ್ಥಿಮಿತವಿಲ್ಲದಂತೆ ಕಂಡು ಬಂದ ಆಕೆಯನ್ನು ಪೊಲೀಸರು ವಶಪಡಿಸಿಕೊಂಡು ಥಾಣೆಯ ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಂಧಿತ ನಟಿಯನ್ನು ಮಿತಾಲಿ ಶರ್ಮ (25) ಎಂದು ಗುರುತಿಸಲಾಗಿದೆ. ಆಕೆಯ ನಟನಾ ವೃತ್ತಿ ಮೊಟಕುಗೊಂಡ ನಂತರ ಆಕೆಯ ಕುಟುಂಬವೂ ಆಕೆಯನ್ನು ದೂರ ಮಾಡಿತ್ತೆನ್ನಲಾಗಿದೆ. ಆಕೆ ಭೋಜಪುರಿ ಚಿತ್ರವೊಂದರಲ್ಲಿ ನಟಿಸಿದ್ದು ಒಂದೆರಡು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾಳೆನ್ನಲಾಗಿದೆ.
ದೆಹಲಿಯ ನಿವಾಸಿಯಾಗಿರುವ ಮಿತಾಲಿ ಓಶಿವಾರಾದ ಹೌಸಿಂಗ್ ಸೊಸೈಟಿಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕಾರೊಂದರ ಗಾಜನ್ನು ಹುಡಿ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಳು. ತನ್ನನ್ನು ಸೆರೆ ಹಿಡಿಯಲು ಬಂದ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಆಕೆ ಹಲ್ಲೆ ನಡೆಸಿದರೂ ಪೊಲೀಸರು ಆಕೆಯನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆಕೆಗೆ ಚಿತ್ರಗಳಲ್ಲಿ ನಟಿಸಲು ಆಫರ್ ಬರುವುದು ನಿಂತಾಗ ಆಕೆ ಖಿನ್ನತೆಗೆ ಜಾರಿದ್ದು ಮುಂಬೈನಲ್ಲಿ ಒಬ್ಬಳೇ ರಸ್ತೆ ಬದಿಗಳಲ್ಲಿ ವಾಸಿಸುತ್ತಿದ್ದಳೆನ್ನಲಾಗಿದೆ.
ಪೊಲೀಸರು ಆಕೆಯನ್ನು ಬಂಧಿಸಿದ ಕೂಡಲೇ ಆಕೆ ಆಹಾರಕ್ಕೆ ಬೇಡಿಕೆಯಿಟ್ಟಿದ್ದು ಆಕೆ ಆಹಾರ ಸೇವಿಸದೆ ಒಂದೆರಡು ದಿನಗಳಾಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.
ಆಕೆ ಯಾರ ಜತೆಗೂ ಮಾತನಾಡುತ್ತಿಲ್ಲವಾಗಿದ್ದು ಆಕೆ ಸಹಜ ಸ್ಥಿತಿಗೆ ಬರಲು ಕನಿಷ್ಠ ಹತ್ತು ದಿನಗಳಾದರೂ ಬೇಕೆಂದು ಥಾಣೆಯ ಮಾನಸಿಕ ಆಸ್ಪತ್ರೆಯ ಡಾ. ಅಂಜಲಿ ದೇಶಪಾಂಡೆ ಹೇಳಿದ್ದಾರೆ.
ತೊಂಬತ್ತರ ದಶಕದಲ್ಲಿ ಮಾಡೆಲ್ ಆಗಿ ಮಿಂಚಿದ್ದ ಗೀತಾಂಜಿ ನಾಗ್ಪಾಲ್ ಎಂಬಾಕೆ 2007ರಲ್ಲಿ ರಸ್ತೆ ಬದಿಯಲ್ಲಿ ವಾಸಿಸುವುದು ಪತ್ತೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.







