ಪುತ್ತೂರು: ವಾಣಿಜ್ಯ ಬೆಳೆಯಾಗಿ ಗೇರು ಮತ್ತು ಕರಿಮೆಣಸು ಹೆಚ್ಚು ಲಾಭದಾಯಕ ಕೃಷಿಯಾಗಿದೆ-ಸುರೇಂದ್ರ ಹೆಗ್ಡೆ
ಕಡಮಜಲು ಸ್ವೇದ ಬಿಂದು ಗೇರು ತೋಟದಲ್ಲಿ ಗೇರು, ಕರಿಮೆಣಸು ಕೃಷಿ ಮಾಹಿತಿ ಕಾರ್ಯಾಗಾರ

ಪುತ್ತೂರು: ಗೇರು ಬೆಳೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತರುವಂತಹ ಒಂದು ವಾಣಿಜ್ಯ ಬೆಳೆಯಾಗಿದೆ. ಗೇರು ಮತ್ತು ಕರಿಮೆಣಸು ಬೆಳೆಯನ್ನು ರೈತ ವಾಣಿಜ್ಯ ಬೆಳೆಯಾಗಿ ಬೆಳೆದರೆ ಹೆಚ್ಚು ಲಾಭವನ್ನು ಪಡೆಯಬಹುದು. ಈಗಾಗಲೇ ಬ್ಯಾಂಕ್ ಕೂಡ ಪ್ರೋತ್ಸಾಹ ರೂಪದಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಿದೆ.ಭಾರತದಿಂದ ಅತ್ಯಂತ ಹೆಚ್ಚು ಗೇರು ಉತ್ಪನ್ನ ಹೊರ ದೇಶಗಳಿಗೆ ರಫ್ತು ಆಗುತ್ತಿದೆ ಅದೇ ರೀತಿ ಕರಿಮೆಣಸು ಉತ್ಪನ್ನಗಳ ರಫ್ತಿನಲ್ಲಿ ಭಾರತ 3 ನೇ ಸ್ಥಾನದಲ್ಲಿದೆ. ರೈತರು ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಂಡು ಕೃಷಿ ಮಾಡುವ ಮೂಲಕ ಹೆಚ್ಚು ಲಾಭವನ್ನು ಪಡೆಯಬಹುದು ಎಂದು ವಿಜಯ ಬ್ಯಾಂಕ್ ಮಂಗಳೂರು ವಲಯ ಕಛೇರಿಯ ಉಪ ಮಹಾಪ್ರಬಂಧಕ ಸುರೇಂದ್ರ ಹೆಗ್ಡೆ ಹೇಳಿದರು.
ಅವರು ಎ.26 ರಂದು ಕೆದಂಬಾಡಿ ಗ್ರಾಮದ ಕಡಮಜಲು ಸ್ವೇದ ಬಿಂದು ಗೇರು ತೋಟದಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಬೆಳ್ಳಿ ಹಬ್ಬದ ಆಚರಣೆಯ ಅಂಗವಾಗಿ ಆಯೋಜನೆ ಮಾಡಿದ್ದ ಗೇರು ಮತ್ತು ಕರಿಮೆಣಸು ಕೃಷಿ ಮಾಹಿತಿ ಕಾರ್ಯಾಗಾರವನ್ನು ಗೇರು ಮತ್ತು ಕರಿಮೆಣಸಿನ ಗಿಡಕ್ಕೆ ನೀರು ಉಣಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು.
ವೈಜ್ಞಾನಿಕ ಗೇರು ಕೃಷಿಕ, ಸ್ವೇದ ಬಿಂದು ಗೇರು ತೋಟದ ಮಾಲೀಕ ಕಡಮಜಲು ಸುಭಾಷ್ ರೈ ಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಅನಿತಾ ಹೇಮನಾಥ ಶೆಟ್ಟಿ, ತಿಂಗಳಾಡಿ ಪಂಚಮಿ ಕ್ಯಾಶ್ಯೂ ಎಕ್ಸ್‌ಪೋರ್ಟ್‌ನ ಮಾಲಕ ಮಿತ್ರಂಪಾಡಿ ಪುರಂದರ ರೈ, ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಂಗಳಾಡಿ, ವಿ.ಆರ್.ಡಿ.ಎಫ್ ಮಂಗಳೂರು ಇದರ ಮುಖ್ಯ ಪ್ರಬಂಧಕ ಉದಯ್ ಹೆಗಡೆ, ಕೆಯ್ಯೂರು ಗ್ರಾ.ಪಂ ಸದಸ್ಯ, ಪ್ರಗತಿಪರ ಗೇರು ಕೃಷಿಕ ಎ.ಕೆ ಜಯರಾಮ ರೈ, ವಿ.ಆರ್.ಡಿ.ಎಫ್ ಮಂಗಳೂರು ಇದರ ಉಪಾಧ್ಯಕ್ಷ ಪ್ರೇಮನಾಥ ಆಳ್ವ, ಕುಂಬ್ರ ವಿಜಯ ಬ್ಯಾಂಕ್‌ನ ಶಾಖಾಧಿಕಾರಿ ಗೌತಮ್ ಎನ್.ಶರವು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ಇದರ ನಿವೃತ್ತ ಹಿರಿಯ ವಿಜ್ಞಾನಿ ಡಾ.ಯದು ಕುಮಾರ್ ಮತ್ತು ಹಿರಿಯ ವಿಜ್ಞಾನಿ ಡಾ.ಗಂಗಾಧರ್ ನಾಯಕ್‌ರವರುಗಳಿಂದ ಗೇರು ಮತ್ತು ಕರಿಮೆಣಸು ಕೃಷಿಯ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು. ನೂರಾರು ಮಂದಿ ರೈತರು ಮಾಹಿತಿಯ ಪ್ರಯೋಜನ ಪಡೆದುಕೊಂಡರು. ವಿ.ಆರ್.ಡಿ.ಎಫ್ ಮಂಗಳೂರು ಇದರ ಕಾರ್ಯದರ್ಶಿ ಬಿ.ರಾಜೇಂದ್ರ ರೈ ಸ್ವಾಗತಿಸಿದರು. ವಿ.ಆರ್.ಡಿ.ಎಫ್ ಮಂಗಳೂರು ಇದರ ಸಿ.ಇ.ಒ ಬಸಪ್ಪ ಮುಧೋಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಆಡಳಿತ ಮಂಡಳಿಯ ಸದಸ್ಯ ಜಯಪ್ರಕಾಶ ರೈ, ಈಶ್ವರಮಂಗಲ ಗ್ರಾಮ ಸಮಿತಿಯ ಅಧ್ಯಕ್ಷ ಡಾ. ಶ್ರೀ ಕುಮಾರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.







