ಉಪ್ಪಿನಂಗಡಿ: ಕೊಲೆ ಬೆದರಿಕೆ - ಆರೋಪಿಗೆ ಜಾಮೀನು
ಉಪ್ಪಿನಂಗಡಿ: ತೋಟಕ್ಕೆ ಅಕ್ರಮ ಪ್ರವೇಶಗೈದು ದಂಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾಗಿದ್ದ ಸಿರಿಬಾಗಿಲು ಗ್ರಾಮದ ಪೆರ್ಜೆ ನಿವಾಸಿಪೂವಪ್ಪರಿಗೆ ನ್ಯಾಯಾಲಯ ಜಾಮೀನು ನೀಡಿದೆ.
ಸಿರಿಬಾಗಿಲು ಗ್ರಾಮದ ಪೆರ್ಜೆ ನಿವಾಸಿ ವಿಶಾಲಾಕ್ಷಿ ಅವರು ಕಳೆದ ಮಾರ್ಚ್ 23ರಂದು ತನ್ನ ಗಂಡನ ಅಕ್ಕನ ತೋಟಕ್ಕೆ ಅಡಿಕೆ ಹೆಕ್ಕಲು ಹೋದ ಸಂದರ್ಭ ಆರೋಪಿ ಪೂವಪ್ಪ ಎಂಬಾತ ಈ ತೋಟಕ್ಕೆ ಅಕ್ರಮ ಪ್ರವೇಶಗೈದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆಯೊಡ್ಡಿದ್ದರು. ಈ ಬಗ್ಗೆ ವಿಶಾಲಾಕ್ಷಿಯವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಗಂಡನಿಗೂ ಕೊಲೆ ಬೆದರಿಕೆಯೊಡ್ಡಿದ್ದಾನೆ ಎಂದು ದೂರಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಪುತ್ತೂರು ನ್ಯಾಯಾಲಯಕ್ಕೆ ಚಾರ್ಚ್‌ಶೀಟ್ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಪುತ್ತೂರು ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿ ಆದೇಶಿಸಿದೆ.
ಆರೋಪಿಯ ಪರ ನ್ಯಾಯವಾದಿಗಳಾದ ಅನಿಲ್ ಕುಮಾರ್ ಉಪ್ಪಿನಂಗಡಿ ಹಾಗೂ ಸಂದೇಶ್ ನಟ್ಟಿಬೈಲ್ ವಾದಿಸಿದರು.





