ತಲೆಕಡಿಯುವ ಹೇಳಿಕೆ ಉವೈಸಿಗೆ ಪ್ರತಿಕ್ರಿಯೆಯಾಗಿತ್ತಷ್ಟೇ:ರಾಮದೇವ

ಹೊಸದಿಲ್ಲಿ,ಎ.26: ಕಾನೂನೊಂದು ಇಲ್ಲದಿದ್ದರೆ ‘ಭಾರತ ಮಾತಾ ಕೀ ಜೈ’ ಎಂದು ಹೇಳಲು ನಿರಾಕರಿಸುವವರ ತಲೆಗಳನ್ನು ತಾನು ಕಡಿಯುತ್ತಿದ್ದೆ ಎಂಬ ತನ್ನ ಹೇಳಿಕೆಯಿಂದ ಯೋಗಗುರು ರಾಮದೇವ ಹಿಂದೆ ಸರಿದಿರುವಂತಿದೆ.ತನ್ನ ಕುತ್ತಿಗೆಯ ಮೇಲೆ ಚೂರಿಯಿಟ್ಟರೂ ತಾನು ‘ಭಾರತ ಮಾತಾ ಕೀ ಜೈ’ ಎಂದು ಹೇಳುವುದಿಲ್ಲ ಎಂಬ ಎಐಎಂಐಎಂ ನಾಯಕ ಅಸಾದುದ್ದೀನ್ ಉವೈಸಿಯ ಹೇಳಿಕೆ ತಾನು ಪ್ರತಿಕ್ರಿಯಿಸಿದ್ದಷ್ಟೇ ಎಂದು ಅವರು ಮಂಗಳವಾರ ಇಲ್ಲಿ ಸಮಜಾಯಿಷಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಇಸ್ಲಾಂ ಮತ್ತು ಕ್ರಿಶ್ಚಿಯನ್‌ನಂತಹ ಧರ್ಮಗಳನ್ನು ಅವಮಾನಿಸುವುದು ಉವೈಸಿಯ ಮೂರ್ಖತನದ ಹೇಳಿಕೆಯಿದ್ದಂತೆ ಎಂದು ಹೇಳಿದರು.
ನಾನು ಅಹಿಂಸೆ,ಸಹಜೀವನ ಮತ್ತು ಏಕತೆಯಲ್ಲಿ ನಂಬಿಕೆಯಿರಿಸಿದ್ದೇನೆ. ನನ್ನ ತಲೆಯನ್ನು ಬೇಕಾದರೆ ಕತ್ತರಿಸಿ,ಆದರೆ ನಾನು ಕುರ್‌ಆನ್ ಅಥವಾ ಬೈಬಲ್‌ನ್ನು ಗೌರವಿಸುವುದಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ನನಗೆ ನನ್ನ ಧರ್ಮದ ಬಗ್ಗೆ ಹೆಮ್ಮೆಯಿದೆ,ಆದರೆ ಇತರ ಧರ್ಮಗಳನ್ನು ಅವಮಾನಿಸಲು ಅದು ನನಗೆ ಪರವಾನಿಗೆ ನೀಡುವುದಿಲ್ಲ. ಅದು ಉವೈಸಿಯಷ್ಟೇ ಮೂರ್ಖತನದ್ದಾಗುತ್ತದೆ ಎಂದರು.





