ಭಟ್ಕಳ : ಭಯೋತ್ಪಾದನೆ ಆರೋಪದಲ್ಲಿ ಓರ್ವನ ಬಂಧನ
ಭಟ್ಕಳ, ಎ.26: ಭಯೋತ್ಪಾದನೆಯ ಆರೋಪದಲ್ಲಿ ಭಟ್ಕಳ ಮೂಲದ ಓರ್ವ ವ್ಯಕ್ತಿಯನ್ನು ಮುಂಬೈ ಎಟಿಎಸ್ ಅಧಿಕಾರಿಗಳು ಬಂಧಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದು ಈ ಕುರಿತಂತೆ ಬಂಧಿತ ವ್ಯಕ್ತಿಯ ಕುಟುಂಬ ಮೂಲಗಳು ಬಂಧನವನ್ನು ದೃಢಪಡಿಸಿವೆ.
ಬಂಧಿತ ವ್ಯಕ್ತಿಯನ್ನು ಸಿದ್ದೀಖ್ ಸ್ಟ್ರೀಟ್ ನಿವಾಸಿ ಝೈನುಲ್ ಆಬಿದೀನ್ ಶೇಕ್ (25) ಎಂದು ತಿಳಿದು ಬಂದಿದೆ.
ಈ ಕುರಿತಂತೆ ಮಂಗಳವಾರ ಬಂಧಿತ ವ್ಯಕ್ತಿಯ ತಂದೆ ಅಬ್ದುಲ್ ರಝಾಖ್ ಶೇಕ್‌ರನ್ನು ಅವರ ಮನೆಯಲ್ಲಿ ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಮುಂದೆ ಅವರು ಮಾಹಿತಿ ನೀಡಿದರು. ಬಂಧಿತ ಶೇಖ್ ಕಳೆದ ನಾಲ್ಕು ವರ್ಷಗಳಿಂದ ದಮ್ಮಾಮ್‌ನಲ್ಲಿ ಉದ್ಯೋಗ ಮಾಡುತ್ತಿದ್ದು ಕಳೆದ ಐದು ತಿಂಗಳ ಹಿಂದೆ ದಮ್ಮಾಮ್ ಸರಕಾರ ಯಾವುದೋ ಪ್ರಕರಣವೊಂದರಲ್ಲಿ ಬಂಧಿಸಿದ್ದು ತಾನು ಇಲ್ಲಿ ಜೈಲಿನಲ್ಲಿದ್ದೇನೆ. ನನ್ನ ಮೇಲೆ ಯಾವುದೇ ಪ್ರಕರಣಗಳಿಲ್ಲ. ಒಂದು ವಾರದಲ್ಲಿ ಬಿಡುಗಡೆಯಾಗಿ ಭಟ್ಕಳಕ್ಕೆ ಬರುತ್ತೇನೆ ಎಂದು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ ್ದಎಂಬುದಾಗಿ ತಂದೆ ಅಬ್ದುರ್ರಝಾಖ್ ಶೇಖ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆದರೆ ಮಂಗಳವಾರ 12 ಗಂಟೆ ವೇಳೆ ಮೊಬೈಲ್‌ಗೆ ಕರೆಯೊಂದು ಬಂದಿದ್ದು ತಾವು ಎಟಿಎಸ್ ಅಧಿಕಾರಿಗಳಾಗಿದ್ದು ಮುಂಬೈನಿಂದ ಮಾತನಾಡುತ್ತಿದ್ದು ನಿಮ್ಮ ಮಗ ನಮ್ಮ ವಶದಲ್ಲಿದ್ದಾನೆ ಎಂದು ತಿಳಿಸಿದ್ದಾರೆ. ಆತನನ್ನು ಯಾವ ಅಪರಾಧಕ್ಕಾಗಿ ಬಂಧಿಸಲಾಯಿತು ಎಂಬುದು ನಮಗೂ ಕಗ್ಗಂಟಾಗಿದೆ. ಯಾವುದೇ ಸಮಾಜ ವಿರೋಧಿ ಕೃತ್ಯದಲ್ಲಿ ಭಾಗಿಯಾಗದ ಆತನ ಮೇಲೆ ಯಾವೆಲ್ಲ ಪ್ರಕರಣಗಳು ದಾಖಲಿಸುತ್ತಾರೋ ಎನ್ನುವ ಭಯ ನನಗೆ ಕಾಡುತ್ತಿದೆ. ನಮ್ಮ ಮನೆಯಲ್ಲಿ ದುಡಿಯುವ ಓರ್ವನಾಗಿದ್ದು ಈಗ ಬಂಧನದಿಂದಾಗಿ ನಮ್ಮ ಕುಟುಂಬ ಆತಂಕದಲ್ಲಿ ಮುಳುಗಿದೆ ಎಂದು ಅಲವತ್ತುಕೊಂಡಿದ್ದಾರೆ.
ಝೈನುಲ್ ಆಬಿದೀನ್ ಬಂಧನ ಕುರಿತಂತೆ ಹಲವಾರು ಊಹಾಪೋಹಗಳು ವೆಬ್ ತಾಣಗಳಲ್ಲಿ ಹರಿದಾಡುತ್ತಿದ್ದು ತನಿಖೆಯಿಂದಲೇ ಸತ್ಯಾಸತ್ಯತೆ ಹೊರಬರಬೇಕಾಗಿದೆ. ಕಳೆದ ಒಂದು ತಿಂಗಳ ಹಿಂದೆ ಪುಣೆ ವಿಮಾನ ನಿಲ್ದಾಣದಲ್ಲಿ ದುಬೈಗೆ ಹೋಗುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಎನ್‌ಐಎ ತಂಡ ಆತ ಐಸಿಸ್ ಸೇರಲು ಸಿರಿಯಾಕ್ಕೆ ಹೋಗುತ್ತಿದ್ದಾನೆ ಎಂದು ಆರೋಪಿಸಿ ನಂತರ ತಪ್ಪು ಮಾಹಿತಿ ಯಿಂದಾಗಿ ಈತನನ್ನು ಬಂಧಿಸಿದ್ದಾಗಿ ತಿಳಿಸಿ ಬಿಡುಗಡೆಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ನನ್ನ ಮಗ ಸಮಾಜ ವಿರೋಧಿ ಕೃತ್ಯದಲ್ಲಿ ಭಾಗಿಯಾಗಿಲ್ಲ: ಝೈನುಲ್ ಆಬಿದೀನ್ ತಂದೆಯ ಅಳಲು
( ಅಬ್ದುಲ್ ರಝಾಖ್ ಶೇಖ್ ಬಂಧಿತ ಝೈನುಲ್ ಅಬೀದಿನ್ ತಂದೆ)








