ನಾವು ಸಂಕೀರ್ಣ ಕಾಲಘಟ್ಟದಲ್ಲಿದ್ದೇವೆ: ಡಾ. ನಾ.ಡಿಸೋಜ
ನೀರು-ನಿರ್ವಹಣೆ’ ಕುರಿತ ಜನಜಾಗೃತಿ ಅಭಿಯಾನಕ್ಕೆ ಚಾಲನೆ
.jpg)
ಸಾಗರ, ಎ. 26: ತಾಲೂಕಿನ ಹೆಸರು ಸಾಗರ. ಆದರೆ ನೀರಿಗೆ ಹಾಹಾಕಾರ ಎನ್ನುವ ಸ್ಥಿತಿ ನಮ್ಮೂರಿಗೂ ಬಂದಿದೆ. ಶರಾವತಿ ಹಿನ್ನೀರು ನಗರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ನಿವಾರಣೆಯಾಗಿದ್ದರೂ, ಮೈಮರೆತು ಕುಳಿತರೆ ಮುಂದೆ ಅಪಾಯ ತಪ್ಪಿದ್ದಲ್ಲ ಎಂದು ಸಾಹಿತಿ ಡಾ. ನಾ.ಡಿಸೋಜ ಹೇಳಿದರು.
ಇಲ್ಲಿನ ತಾಲೂಕು ನಿವೃತ್ತ ನೌಕರರ ಸಂಘ, ಸಾಗರ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಶಿಯೇಷನ್, ಡಾ. ಎಚ್.ಗಣಪತಿಯಪ್ಪ ಸೇವಾ ಟ್ರಸ್ಟ್, ಸಹೃದಯ ಬಳಗ ಹಾಗೂ ವೀತರಾಗ ಟ್ರಸ್ಟ್ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ನೀರು-ನಿರ್ವಹಣೆ ಕುರಿತ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ನಾವು ಸಂಕೀರ್ಣ ಕಾಲಘಟ್ಟದಲ್ಲಿದ್ದೇವೆ. ಹಿಂದಿನ ನೀರಿನ ಸಂಗ್ರಹಕ್ಕಾಗಿ ಅನುಸರಿಸುತ್ತಿದ್ದ ಅನೇಕ ಯೋಜನೆಗಳನ್ನು ನಾವು ಕೈಬಿಟ್ಟಿದ್ದೇವೆ. ಕೆಲವು ಕಡೆಗಳಲ್ಲಿ ನೀರಿಗಾಗಿ ಮೈಲು ಗಟ್ಟಲೆ ಜನರು ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಜನರಲ್ಲಿ ನೀರಿನ ಕುರಿತು ಜಾಗೃತಿ ಮೂಡಿಸಲು ಇಂತಹ ಜಾಗೃತಿ ಕಾರ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು ಎಂದು ತಿಳಿಸಿದರು.
ಪ್ರಕೃತಿಯಿಂದ ಉಚಿತವಾಗಿ ಸಿಗುವ ವಸ್ತುಗಳ ಬಗ್ಗೆ ನಾವು ತೀರ ನಿರ್ಲಕ್ಷ್ಯ ಧೋರಣೆಯನ್ನು ತಳೆದಿದ್ದೇವೆ. ಹಿಂದೆ ವಿಜಯನಗರ ಕಾಲದಲ್ಲಿ ರಾಜ್ಯದಲ್ಲಿ ಒಟ್ಟು 48ಸಾವಿರ ಕೆರೆಗಳು ಇದ್ದವು. ಆದರೆ ಪ್ರಜಾ ಸರಕಾರ ಬಂದ ನಂತರದ ದಿನಗಳಲ್ಲಿ ಕೆರೆಗಳನ್ನು ಪೂರ್ಣ ಮುಚ್ಚಿ ಅಲ್ಲಿ ಕಾಂಕ್ರಿಟ್ ಕಾಡು ನಿರ್ಮಾಣ ಮಾಡಲಾಗಿದೆ. ನಮ್ಮೂರಿನ ನೀರಿನ ಸೆಲೆ ಎಂದು ಗುರುತಿಸಿಕೊಳ್ಳುತ್ತಿದ್ದ ಗಣಪತಿ ಕೆರೆ ಸಹ ಸ್ವಲ್ಪದಿನದಲ್ಲಿ ಹೂಳಿನಿಂದ ಮುಚ್ಚಿ ಹೋದರೆ ಅಚ್ಚರಿಯಿಲ್ಲ ಎಂದರು. ಜಿಪಂ ಸದಸ್ಯ ಕಾಗೋಡು ಅಣ್ಣಪ್ಪ ಮಾತನಾಡಿ, ನೀರಿನ ಅಪವ್ಯಯ ತಡೆಗಟ್ಟುವ ನಿಟ್ಟಿನಲ್ಲಿ ಇಂತಹ ಜಾಗೃತಿ ಅಭಿಯಾನಗಳು ಕಾಲಕಾಲಕ್ಕೆ ನಡೆಸುವ ಅಗತ್ಯವಿದೆ. ನೀರನ್ನು ಮಿತವಾಗಿ ಬಳಸುವ ಜೊತೆಗೆ ಅದನ್ನು ಕಲುಷಿತಗೊಳಿಸದಂತೆ ನಿಗಾ ವಹಿಸುವ ಅಗತ್ಯವಿದೆ ಎಂದರು. ಲೇಖಕ ವಿಲಿಯಂ ಮಾತನಾಡಿ, ವಿದ್ಯುತ್ ಮತ್ತು ನೀರನ್ನು ಮಿತವ್ಯಯವಾಗಿ ಬಳಸುವಂತೆ ಮಕ್ಕಳ ಮೂಲಕ ದೊಡ್ಡವರನ್ನು ಜಾಗೃತಗೊಳಿಸುವ ಅಗತ್ಯವಿದೆ. ಶಾಲಾಕಾಲೇಜುಗಳಲ್ಲಿ ನೀರಿನ ಮಿತ ಬಳಕೆ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕು. ಪಠ್ಯದಲ್ಲಿ ನೀರಿನ ಬಳಕೆ, ಅಗತ್ಯತೆ ಕುರಿತು ಇನ್ನಷ್ಟು ಮಾಹಿತಿಗಳನ್ನು ಸೇರ್ಪಡೆ ಗೊಳಿಸಬೇಕು ಎಂದರು. ನಂತರ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಗಣಪತಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಸಹೃದಯ ಬಳಗ ಸಂಚಾಲಕ ಜಿ.ನಾಗೇಶ್, ಸಾಗರ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಶಿಯೇಷನ್‌ನ ಅಣ್ಣಪ್ಪ ಶೆಟ್ಟಿ, ಎಸ್.ಬಿ.ರಘುನಾಥ್, ಸತ್ಯನಾರಾಯಣ ಶೆಟ್ಟಿ, ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ಎಸ್.ಬಸವರಾಜ್, ಕಾರ್ಯದರ್ಶಿ ಎಂ.ನಾರಾಯಣಪ್ಪ, ಉಪಾಧ್ಯಕ್ಷ ಎಂ.ರಾಮಪ್ಪ, ಖಜಾಂಚಿ ಮಂಜಪ್ಪ ಉಪಸ್ಥಿತರಿದ್ದರು.







