1938ರ ವೈಭವದ ಬೈಕ್ 3.2 ಕೋಟಿ ರೂ.ಗೆ ಹರಾಜು

ಲಂಡನ್, ಎ. 25: ಬ್ರಿಟನ್‌ನ ಹಳ್ಳಿಯೊಂದರ ಕೊಟ್ಟಿಗೆಯಲ್ಲಿ ಪತ್ತೆಯಾದ ಅಪರೂಪದ ಹಳೆಯ ಮೋಟರ್‌ಸೈಕಲೊಂದು ಹರಾಜಿನಲ್ಲಿ 3,31,900 ಪೌಂಡ್ (ಸುಮಾರು 3.2 ಕೋಟಿ ರೂಪಾಯಿ)ಗೆ ಮಾರಾಟವಾಗಿ ದಾಖಲೆ ಸೃಷ್ಟಿಸಿದೆ.
ಇದು 1938ರ ‘ಬ್ರೋ ಸುಪೀರಿಯರ್’ ಎಂಬ ಕಂಪೆನಿ ತಯಾರಿಸಿದ 750ಸಿಸಿ ಬಿಎಸ್4 ಮಾದರಿಯ ಬೈಕ್ ಆಗಿದೆ. ಇಂಥದೇ ಒಟ್ಟು ಎಂಟು ಬೈಕ್‌ಗಳು ಪತ್ತೆಯಾಗಿವೆ. ಇವುಗಳನ್ನು 50 ವರ್ಷಗಳ ಹಿಂದೆಯೇ ಉಪಯೋಗಿಸುವುದನ್ನು ನಿಲ್ಲಿಸಲಾಗಿತ್ತು ಎಂದ ನಂಬಲಾಗಿದೆ.
ಈ ಬೈಕ್‌ಗಳನ್ನು ಕಳೆದ ವರ್ಷ ಕಾರ್ನಿಶ್ ಎಂಬ ಹಳ್ಳಿಯ ಮನೆಯೊಂದರಲ್ಲಿ ಪತ್ತೆಹಚ್ಚಲಾಗಿತ್ತು.
ಎಲ್ಲ 8 ಬೈಕ್‌ಗಳು ಒಟ್ಟು 7,52,625 ಪೌಂಡ್ (ಸುಮಾರು 7.2 ಕೋಟಿ ರೂಪಾಯಿ)ಗೆ ಹರಾಜಾದವು.
1938 ಬ್ರೋ ಸುಪೀರಿಯರ್ 750 ಸಿಸಿ ಬೈಕ್ ನಾಲ್ಕು ಸಿಲಿಂಡರ್‌ಗಳ ಇಂಜಿನ್ ಹೊಂದಿದೆ. ಬೈಕ್ ನಿರ್ಮಾಣಗೊಂಡ ಕಾಲದಲ್ಲಿ ಇದು ತಾಂತ್ರಿಕ ಪವಾಡವೇ ಆಗಿತ್ತು. ಆ ಕಾಲದ ಹೆಚ್ಚಿನ ಮೋಟರ್‌ಬೈಕ್‌ಗಳು ಏಕ ಸಿಲಿಂಡರ್ ಇಂಜಿನ್‌ಗಳನ್ನು ಹೊಂದಿದ್ದವು.
ಬ್ರೋ ಸುಪೀರಿಯರ್ ಬೈಕ್‌ಗಳು 1920 ಮತ್ತು 1930ರ ದಶಕಗಳಲ್ಲಿ ಸ್ಥಾಪಕ ಜಾರ್ಜ್ ಬ್ರೋ ಎಂಬವರ ಕಾರ್ಖಾನೆಯಲ್ಲಿ ನಿರ್ಮಾಣಗೊಂಡವು.







