‘ಅರಣ್ಯವನ್ನು ಉಳಿಸಿ ಬೆಳೆಸುವ ಕೆಲಸವಾಗಲಿ: ಶಾಸಕ ಎಸ್. ಮಧುಬಂಗಾರಪ್ಪ

ಸೊರಬ,ಎ.26: ಭೂಮಿಯ ಸಮತೋಲನಕ್ಕೆ ಕಾಡಿನ ಪ್ರಾಮುಖ್ಯತೆ ಹೆಚ್ಚಿದ್ದು, ಪ್ರತಿಯೊಬ್ಬರು ಅರಣ್ಯವನ್ನು ಉಳಿಸಿ, ಬೆಳೆಸುವ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಶಾಸಕ ಎಸ್. ಮಧುಬಂಗಾರಪ್ಪ ಹೇಳಿದ್ದಾರೆ.
ಪಟ್ಟಣದ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರಸಕ್ತ ಸಾಲಿನ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿಯಲ್ಲಿ ಎಲ್‌ಪಿಜಿ ವಿತರಣೆ ಮತ್ತು ಕೃಷಿ ಪ್ರೋತ್ಸಾಹ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ವಿತರಿಸಿ ಅವರು ಮಾತನಾಡಿದರು.
ಬಗರ್‌ಹುಕುಂ ಸಾಗುವಳಿದಾರರಿಗೆ ಕಾನೂನಿನಲ್ಲಿ ರಕ್ಷಣೆ ಇದೆ. ಆದರೆ, ಇದನ್ನು ದುರುಪಯೋಗಪಡಿಸಿಕೊಂಡು ರೈತರು ಹೆಚ್ಚುವರಿ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಿದರೆ ಭವಿಷ್ಯದಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ. ಕಾಡನ್ನು ನಾಶ ಮಾಡುತ್ತಲೇ ಹೋದರೆ ಮುಂದಿನ ಅನೇಕ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದರು. ಗ್ರಾಮಗಳಲ್ಲಿ ಅರಳಿಕಟ್ಟೆ ಪಂಚಾಯತ್ ಮಾಡುವವರು ಅರಣ್ಯ ಉಳಿಸುವ ವಿಚಾರದಲ್ಲಿ ಪಂಚಾಯತ್ ಮಾಡಿದರೆ ಒಳ್ಳೆಯದು, ನಮ್ಮ ತಂದೆ ಎಸ್. ಬಂಗಾರಪ್ಪನವರ ಕಾಲದಲ್ಲಿ ಸ್ವಂತ ಜಮೀನಿನಲ್ಲಿ ಅರಣ್ಯವನ್ನು ಬೆಳೆಸಲಾಗಿದ್ದು, ಪ್ರಸ್ತುತ ಕಡುತಲೆಗೆ ಬಂದಿದೆ. ಇದರಿಂದ ಬರುವ ಆದಾಯವನ್ನು ಅಲ್ಲಿನ ಗ್ರಾಮ ಪಂಚಾಯತ್‌ನ ಸ್ಥಳೀಯ ಅಭಿವೃದ್ಧಿ ಕಾಮಗಾರಿಗೆ ನೀಡಲಾಗುವುದು ಎಂದ ಅವರು, ಸೌದೆಗಾಗಿ ಅರಣ್ಯ ನಾಶ ಮಾಡುವ ಜನರಿಂದ ಅರಣ್ಯ ರಕ್ಷಿಸುವ ಸಲುವಾಗಿ ಉಚಿತ ಎಲ್‌ಪಿಜಿಯನ್ನು ನೀಡುವುದು ಹಾಗೂ ಅರಣ್ಯ ಬೆಳೆಸುವವರನ್ನು ಪ್ರೋತ್ಸಾಹಿಸುವ ಸರಕಾರದ ಯೋಜನೆ ಮಹತ್ವದ್ದಾಗಿದೆ ಎಂದರು. ಈ ಸಂದಭರ್ದಲ್ಲಿ ಜಿಪಂ ಸದಸ್ಯೆ ರಾಜೇಶ್ವರಿ ಗಣಪತಿ, ತಾಪಂ ಅಧ್ಯಕ್ಷ ಜೈಶೀಲಪ್ಪ, ಸದಸ್ಯರಾದ ಬರಗಿ ನಿಂಗಪ್ಪ, ಪಪಂ ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ, ಸದಸ್ಯರಾದ ಮಂಚಿ ಹನುಮಂತಪ್ಪ, ಮಹೇಶ್ ಗೌಳಿ, ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಗಂಗೊಳ್ಳಿ, ವಲಯ ಅರಣ್ಯಾಧಿಕಾರಿಗಳಾದ ಎಂ.ಎಸ್. ಅಜಯ್‌ಕುಮಾರ್, ಭಾಗ್ಯವಂತ ಮಸೂತಿ, ಚಂದ್ರಕಾಂತ್, ಉಪವಲಯ ಅರಣ್ಯಾಧಿಕಾರಿ ಜಿ.ಎಸ್. ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.





