ಪಾಕ್ ಸಿಖ್ ಸಚಿವನ ಹತ್ಯೆ: 6 ಬಂಧನ

ಇಸ್ಲಾಮಾಬಾದ್, ಎ. 26: ಪಾಕಿಸ್ತಾನದ ಖೈಬರ್ ಪಖ್ತೂನ್‌ಖ್ವ ರಾಜ್ಯದಲ್ಲಿ ಪ್ರಮುಖ ಸಿಖ್ ರಾಜಕಾರಣಿಯೋರ್ವನನ್ನು ಹತ್ಯೆ ಮಾಡಿದ ಆರೋಪದಲ್ಲಿ ಪಾಕಿಸ್ತಾನದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸರ್ದಾರ್ ಸೊರನ್ ಸಿಂಗ್‌ರನ್ನು ಬುನರ್ ಜಿಲ್ಲೆಯಲ್ಲಿ ಕಳೆದ ಶುಕ್ರವಾರ ಹತ್ಯೆ ಮಾಡಲಾಗಿತ್ತು.
ಎದುರಾಳಿ ಸಿಖ್ ರಾಜಕಾರಣಿ ಬಲದೇವ್ ಕುಮಾರ್ ಎಂಬಾತ ಸಚಿವರ ಹತ್ಯೆಗೆ ಸುಪಾರಿ ನೀಡಿದ್ದನು ಎಂದು ಪೊಲೀಸರು ಹೇಳಿದ್ದಾರೆ ಎಂದು ಎಫೆ ನ್ಯೂಸ್ ವರದಿ ಮಾಡಿದೆ.
ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ಸ್ಪರ್ಧಿಸಲು ಬಲದೇವ್ ಕುಮಾರ್ ತಹ್ರೀಕೆ ಇನ್ಸಾಫ್ ಪಕ್ಷದಿಂದ ಟಿಕೆಟ್ ಕೇಳಿದ್ದನು; ಆದರೆ, ಆ ಕ್ಷೇತ್ರವನ್ನು ಸೊರನ್ ಸಿಂಗ್‌ಗೆ ಪಕ್ಷವು ನೀಡಿತ್ತು; ಇದು ಹತ್ಯೆಗೆ ಕಾರಣವಾಗಿತ್ತು ಎಂದು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಝಾದ್ ಖಾನ್ ಸೋಮವಾರ ತಿಳಿಸಿದರು.
ಹತ್ಯೆಯ ಹೊಣೆಯನ್ನು ಪಾಕಿಸ್ತಾನಿ ತಾಲಿಬಾನ್ ತಪ್ಪಾಗಿ ಹೊತ್ತುಕೊಂಡಿತ್ತು ಎಂದು ಪೊಲೀಸರು ಹೇಳಿಕೊಂಡಿದ್ದಾರೆ.
ಸಚಿವರ ಹತ್ಯೆಗೆ ಬಂಧಿತರಿಗೆ ಸುಪಾರಿ ನೀಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಉನ್ನತ ನಾಗರಿಕ ಪ್ರಶಸ್ತಿ ನೀಡಿ : ಮುಸ್ಲಿಂ ಸಂಘಟನೆ ಆಗ್ರಹ
ಪಾಕಿಸ್ತಾನದ ಉನ್ನತ ಪ್ರಶಸ್ತಿಗಳ ಪೈಕಿ ಒಂದಾಗಿರುವ ‘ತಮ್ಘ-ಇ-ಇಮ್ತಿಯಾಝ್’ ಪ್ರಶಸ್ತಿಯನ್ನು ಹತ್ಯೆಗೀಡಾಗಿರುವ ಸಚಿವ ಸರ್ದಾರ್ ಸೊರನ್ ಸಿಂಗ್‌ರಿಗೆ ನೀಡಬೇಕು ಎಂದು ಮುಸ್ಲಿಂ ಸಂಘಟನೆಯೊಂದು ಕರೆ ನೀಡಿದೆ.
ಮುಸ್ಲಿಂ ಧರ್ಮಗುರುಗಳು ಮತ್ತು ವಿದ್ವಾಂಸರ ಸಂಘಟನೆಯಾಗಿರುವ ಪಾಕಿಸ್ತಾನ್ ಉಲೇಮಾ ಕೌನ್ಸಿಲ್ ಈ ಬೇಡಿಕೆಯನ್ನು ಮುಂದಿಟ್ಟಿದೆ.
ನಿನ್ನೆ ನಡೆದ ಸಭೆಯೊಂದರಲ್ಲಿ ಅದು ಹತ ಸಚಿವರಿಗೆ ಶ್ರದ್ಧಾಂಜಲಿ ಅರ್ಪಿಸಿದೆ.







