ಬಿಜೆಪಿ ‘ಬರ’ ರಾಜಕೀಯಕ್ಕೆ ಉಗ್ರಪ್ಪ ಕಿಡಿ

ಬೆಂಗಳೂರು, ಎ.26: ರಾಜ್ಯವನ್ನು ಪ್ರತಿನಿಧಿಸುತ್ತಿರುವ ನಾಲ್ವರು ಕೇಂದ್ರ ಸಚಿವರು, 17 ಮಂದಿ ಬಿಜೆಪಿ ಸಂಸದರು, ವಿಪಕ್ಷ ನಾಯಕರು ಹಾಗೂ ಆ ಪಕ್ಷದ ರಾಜ್ಯಾಧ್ಯಕ್ಷರು, ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವಾಗದೆ, ಬರದ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆಂದು ಕಾಂಗ್ರೆಸ್ ವಕ್ತಾರ ವಿ.ಎಸ್.ಉಗ್ರಪ್ಪ ಆರೋಪ ಮಾಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಬರ ಪರಿಸ್ಥಿತಿ ಅಧ್ಯಯನ ಹಾಗೂ ಪರಿಹಾರ ಕಾರ್ಯಗಳಿಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಂಡಿದೆ ಎಂದು ಸಮರ್ಥಿಸಿಕೊಂಡರು.
ಸಿಎಂ ಸಿದ್ದರಾಮಯ್ಯನವರೇ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಸಂಪುಟದ ನಾಲ್ಕು ಉಪ ಸಮಿತಿಗಳು ಬರ ಅಧ್ಯಯನ ಹಾಗೂ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ. ಆದರೆ, ಹವಾನಿಯಂತ್ರಣ ಕೊಠಡಿ ಯಲ್ಲಿ ಕುಳಿತಿರುವ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರ ‘ಕಾಟಾಚಾರದ ಬರ ಅಧ್ಯಯನ’ ಎಂಬ ಬೇಜವಾಬ್ದಾರಿ ಹೇಳಿಕೆ ಸಲ್ಲ ಎಂದು ಉಗ್ರಪ್ಪ ಆಕ್ಷೇಪಿಸಿದರು.
ಚಿಕಿತ್ಸೆ ಅಗತ್ಯ: ಬಿಸಿಲಿನ ತಾಪಮಾನ ತಾಳಲಾರದೆ ಎಸಿ ಕೊಠಡಿಯಲ್ಲಿ ಕುಳಿತಿರುವ ಜಗದೀಶ್ ಶೆಟ್ಟರ್ ಅವರಿಗೆ ಮಾನಸಿಕ ಚಿಕಿತ್ಸೆ ಅಗತ್ಯವಿದೆ ಎಂದು ಟೀಕಿಸಿದ ಅವರು, ಅಧಿಕೃತ ವಿರೋಧ ಪಕ್ಷವಾಗಿ ಬರ ಪರಿಸ್ಥಿತಿಯ ಬಗ್ಗೆ ಬಿಜೆಪಿ ಹೊಣೆಗಾರಿಕೆಯೇನು ಎಂದು ಖಾರವಾಗಿ ಪ್ರಶ್ನಿಸಿದರು.
ರಾಜ್ಯದಲ್ಲಿನ ಬರ ಪರಿಸ್ಥಿತಿ ಅಧ್ಯಯನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಬೇಕು. ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ವಿಶೇಷ ಪ್ಯಾಕೇಜ್ ಸೇರಿದಂತೆ ಅಗತ್ಯ ನೆರವು ನೀಡಬೇಕು. ಆ ಮೂಲಕ ಬಿಜೆಪಿ ತನ್ನ ಬದ್ಧತೆಯನ್ನು ಪ್ರದರ್ಶಿಸಲಿ ಎಂದು ಉಗ್ರಪ್ಪ ಸವಾಲು ಹಾಕಿದರು.
ರಾಜ್ಯದ 137 ತಾಲೂಕುಗಳಲ್ಲಿ ಬರ ಆವರಿಸಿದ್ದು, 20 ಸಾವಿರ ಕೋಟಿ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಆದರೆ, ಕೇಂದ್ರ ಕೇವಲ 1,540 ಕೋಟಿ ರೂ.ಗಳನಷ್ಟೇ ಬಿಡುಗಡೆ ಮಾಡಿದೆ. ಬಿಜೆಪಿ ಮುಖಂಡರು ಬರದಲ್ಲಿ ರಾಜಕೀಯ ಬಿಟ್ಟು ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.





