ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಮುಸ್ಲಿಂ ಹುಡುಗಿಯರಿಗೆ ಕೇರಳ ಹೈಕೋರ್ಟ್ ಅನುಮತಿ
ಕೊಚ್ಚಿ, ಎ.26: ಮುಸ್ಲಿಂ ಹುಡುಗಿಯರಿಗೆ ಹಿಜಾಬ್ ಧರಿಸಿ ಆಲ್ ಇಂಡಿಯಾ ಪ್ರಿ-ಮೆಡಿಕಲ್ ಟೆಸ್ಟ್ (ಎಐಪಿಎಂಇಟಿ) ಬರೆಯಲು ಕೇರಳ ಹೈಕೋರ್ಟ್ ಇಂದು ಅನುಮತಿ ನೀಡಿದೆ.
ಅಮ್ನಾ ಬಿಂತ್ ಬಶೀರ್ ಅವರು ಎಐಪಿಎಂಇಟಿಗೆ ರೂಪಿಸಲಾದ ಡ್ರೆಸ್ ಕೋಡ್ ಬಗ್ಗೆ ರಾಜ್ಯ ಹೈಕೋರ್ಟ್‌ನ ಮೊರೆ ಹೋಗಿದ್ದರು.
ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಮುಹಮ್ಮದ್ ಮುಷ್ತಾಕ್ ಎಐಪಿಎಂಇಟಿ ಪರೀಕ್ಷೆಯ ವೇಳೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅನುಮತಿ ನೀಡಿತು. ಆದರೆ ಪರೀಕ್ಷೆ ಆರಂಭಕ್ಕೆ ಅರ್ಧಗಂಟೆ ಮೊದಲು ಪರೀಕ್ಷಾ ಹಾಲ್‌ನಲ್ಲಿ ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು ಹಾಜರಿರಬೇಕು. ಅಗತ್ಯ ಬಿದ್ದರೆ ಮಹಿಳಾ ತಪಾಸಣಾಧಿಕಾರಿಗಳು ಅವರನ್ನು ತಪಾಸಣೆ ನಡೆಸಬಹುದು ಎಂದು ಕೋರ್ಟ್ ಆದೇಶ ನೀಡಿದೆ. ಎಐಪಿಎಂಇಟಿ ಪರೀಕ್ಷೆ ತೆಗೆದುಕೊಳ್ಳುವ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಸಿಬಿಎಸ್‌ಇಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕಳೆದ ವರ್ಷ ಸಿಬಿಎಸ್‌ಇ ಎಐಪಿಎಂಟಿ -2015 ಪರೀಕ್ಷೆಗೆ ಇಬ್ಬರು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಕೇರಳ ಹೈಕೋರ್ಟ್‌ನ ಏಕಸದಸ್ಯ ಪೀಠ ಅನುಮತಿ ನೀಡಿತ್ತು.





