ಬಿಹಾರ: ಅತಿಥಿಗಳಿಗೆ ಮದ್ಯ ನೀಡಿ
ವಿವಾದದಲ್ಲಿ ಸಿಲುಕಿದ ಕಾಂಗ್ರೆಸ್ ಶಾಸಕ
ಪಾಟ್ನಾ, ಎ.26: ಬಿಹಾರದ ನೀತೀಶ್ ಕುಮಾರ್ ಸರಕಾರ ರಾಜ್ಯದಾದ್ಯಂತ ಪಾನ ನಿಷೇಧ ವಿಧಿಸಿದೆ. ಆದರೆ, ಅಲ್ಲಿನ ಕಾಂಗ್ರೆಸ್ ಶಾಸಕರೊಬ್ಬರು ತನ್ನ ಅತಿಥಿಗಳಿಗೆ ಭರ್ಜರಿ ಮದ್ಯ ಸಮಾರಾಧನೆ ಮಾಡಿರುವುದು ಕುಟುಕು ಕಾರ್ಯಾಚರಣೆಯಲ್ಲಿ ದಾಖಲಾಗಿದೆ.
ಇದು ಆ ಶಾಸಕನನ್ನೀಗ ಪೇಚಿಗೆ ಸಿಲುಕಿಸಿದೆ.
ಈ ರೀತಿ, ಬರಗಾಲದಲ್ಲಿ ಮದ್ಯದಾನಿಯಾಗಿ ಕ್ಯಾಮರಾದೊಳಗೆ ಸೆರೆಯಾಗಿರುವವರು ಪಶ್ಚಿಮ ಚಂಪಾರಣ್ಯ ಜಿಲ್ಲೆಯ ನರ್ಕಟಿ ಗಂಜ್ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ವರ್ಮ
ಶಾಸಕ ವರ್ಮ, ಕುಟುಕು ಕಾರ್ಯಾಚರಣೆಯ ಹಿಂದಿರುವ ಅಜ್ಞಾತ ಪತ್ರಕರ್ತರ ವಿರುದ್ಧ ದೂರು ದಾಖಲಿಸಲು ಇಂದು ಮುಂಜಾನೆ ಸಿಕಾರ್‌ಪುರ ಪೊಲೀಸ್ ಠಾಣೆಗೆ ಬಂದಿದ್ದರೆಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಮಾನ್ ಕುಮಾರ್ ತಿಳಿಸಿದ್ದಾರೆ.
ಪೊಲೀಸರು ಶಾಸಕರ ಮನವಿಯ ಕುರಿತು ಚರ್ಚೆ ನಡೆಸುತ್ತಿದಾಗ, ಅಪಾಯದ ವಾಸನೆ ಹಿಡಿದ ಅವರ ಬೆಂಬಲಿಗರು, ಶಾಸಕರಿಗೆ ಅಲ್ಲಿಂದ ಪಾರಾಗಲು ಸಹಾಯವಾಗುವಂತೆ ಕೋಲಾಹಲ ಸೃಷ್ಟಿಸಿದರು.
ಪೊಲೀಸ್ ಠಾಣೆಯಿಂದ ಶಾಸಕ ವರ್ಮ ಮಾಯವಾದ ಬಳಿಕ, ಅವರ ವಿರುದ್ಧ ಮುಂದಿನ ಕ್ರಮದ ಕುರಿತು ಪೊಲೀಸರು ಹಾಗೂ ಅಬಕಾರಿ ಅಧೀಕ್ಷಕ ರಾಕೇಶ್ ಕುಮಾರ್ ಚರ್ಚಿಸುತ್ತಿದ್ದಾರೆಂದು ಕುಮಾರ್ ತಿಳಿಸಿದರು.
ಪಾಟ್ನಾದ ಐಶಾರಾಮಿ ಹೊಟೇಲೊಂದರಲ್ಲಿ ಕಾಂಗ್ರೆಸ್ ಶಾಸಕ ತನ್ನ ಅತಿಥಿಗಳಿಗೆ ಮದ್ಯ ನೀಡುತ್ತಿದ್ದುದನ್ನು ತೋರಿಸುವ ಕುಟುಕು ಕಾರ್ಯಾಚರಣೆಯಿಂದ , ಕಾಂಗ್ರೆಸ್ ಪಾಲುದಾರನಾಗಿರುವ ನೀತೀಶ್ ಕುಮಾರ್ ನೇತೃತ್ವದ ಮಹಾ ಮೈತ್ರಿಕೂಟ ಮುಜುಗರ ಅನುಭವಿಸುವಂತಾಗಿದೆ.
ಆದಾಗ್ಯೂ, ಈ ಕುಟುಕು ಕಾರ್ಯಾಚರಣೆಯ ಹಿಂದೆ ‘ಪಿತೂರಿಯಿದೆ’. ತಾನು ಸಸ್ಯಾಹಾರಿ ಸ್ವಚ್ಛ ಚಾರಿತ್ರದ ವ್ಯಕ್ತಿಯಾಗಿದ್ದೇನೆ. ತಾನು ಅತಿಥಿಗಳಿಗೆ ಮದ್ಯ ನೀಡಿರುವ ಮಾತು ಸುಳ್ಳು ಎಂದು ವರ್ಮ ಪ್ರತಿಪಾದಿಸಿದ್ದಾರೆ.





