ಮನೆಗೆ ವಾಪಸಾಗಲು ಹಣದ ಕೊರತೆ ಎದುರಿಸಿದ್ದ ತೆಂಡುಲ್ಕರ್

ಮುಂಬೈ, ಎ.26: ಇದೀಗ ವಿಶ್ವದ ಶ್ರೀಮಂತ ಕ್ರಿಕೆಟಿಗನಾಗಿರುವ ಸಚಿನ್ ತೆಂಡುಲ್ಕರ್ 15 ವರ್ಷದೊಳಗಿನ ತಂಡದೊಂದಿಗೆ ಪುಣೆಗೆೆ ತೆರಳಿದ್ದಾಗ ಮುಂಬೈನಲ್ಲಿ ಮನೆಗೆ ವಾಪಸಾಗಲು ಹಣವಿಲ್ಲದೆ ಪರದಾಡಿದ್ದ ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ.
‘‘ನಾನು 12ನೆ ಹರೆಯದಲ್ಲಿ ಮುಂಬೈನ ಅಂಡರ್-15 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದೆ. ಸ್ವಲ್ಪ ಹಣವನ್ನು ಜೇಬಿನಲ್ಲಿಟ್ಟುಕೊಂಡು ಮೂರು ಪಂದ್ಯಗಳನ್ನು ಆಡಲು ಪೂನಾ(ಪುಣೆ)ಕ್ಕೆ ತಂಡದೊಂದಿಗೆ ತೆರಳಿದ್ದೆ. ಆದರೆ ಆಗ ಅಲ್ಲಿ ಜೋರಾಗಿ ಮಳೆ ಬರುತ್ತಿತ್ತು. ಮಳೆ ನಿಂತ ಮೇಲೆ ಪಂದ್ಯ ಆರಂಭವಾಯಿತು. ನಾನು 4 ರನ್ ಗಳಿಸಿ ರನೌಟಾದೆ. ಬಿಡುವಿಲ್ಲದೆ ಮಳೆ ಬರುತ್ತಿದ್ದರಿಂದ ಕೈಯ್ಯಲ್ಲಿದ್ದ ಹಣವನ್ನೆಲ್ಲ ಖರ್ಚು ಮಾಡಿದ್ದೆ.
ನಾನು ರೈಲಿನಲ್ಲಿ ಮುಂಬೈಗೆ ವಾಪಸಾದಾಗ ಜೇಬಿನಲ್ಲಿ ಬಿಡಿಗಾಸು ಇತ್ತು. ನನ್ನ ಬಳಿ ಎರಡು ದೊಡ್ಡ ಬ್ಯಾಗ್‌ಗಳಿದ್ದವು. ದಾದರ್ ಸ್ಟೇಶನ್‌ಗೆ ತಲುಪಿದ್ದ ನಾನು ಹಣವಿಲ್ಲದ ಕಾರಣ ಟ್ಯಾಕ್ಸಿಯಲ್ಲಿ ತೆರಳದೇ ನಡೆದುಕೊಂಡೇ ಶಿವಾಜಿ ಪಾರ್ಕ್‌ನಲ್ಲಿರುವ ಮನೆಗೆ ಹೋಗಿದ್ದೆ ಎಂದು ಹಳೆಯ ನೆನಪನ್ನು ತೆಂಡುಲ್ಕರ್ ಮೆಲುಕು ಹಾಕಿದರು.
1992ರಲ್ಲಿ ಡರ್ಬನ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ತಂತ್ರಜ್ಞಾನ ಬಳಕೆಯ ಆರಂಭವಾದ ಬಳಿಕ ನಾನು ಮೂರನೆ ಅಂಪೈರ್‌ರಿಂದ ರನ್ ಔಟ್ ತೀರ್ಪಿಗೆ ಒಳಗಾದ ಮೊದಲ ಆಟಗಾರನಾಗಿದ್ದೆ ಎಂದು ತೆಂಡುಲ್ಕರ್ ಹೇಳಿದ್ದಾರೆ







