ರಾಜ್ಯದಲ್ಲಿ ಬರಗಾಲ ಇಲ್ಲ, ಬರೀ ಬೇಸಿಗೆಯಷ್ಟೆ!: ಸಚಿವ ಎಚ್.ಕೆ.ಪಾಟೀಲ್ ವಿವಾದಿತ ಹೇಳಿಕೆ

ಕಲಬುರಗಿ, ಎ.26: ರಾಜ್ಯದಲ್ಲಿ ಭೀಕರ ಸ್ವರೂಪದ ಬರ ಪರಿಸ್ಥಿತಿ ಆವರಿಸಿದ್ದು, ಗ್ರಾಮೀಣ ಪ್ರದೇಶದ ಜನ-ಜಾನುವಾರುಗಳು ಕುಡಿಯುವ ನೀರು-ಮೇವಿಗಾಗಿ ತತ್ತರಿಸುತ್ತಿವೆ. ಆದರೆ, ರಾಜ್ಯದಲ್ಲಿ ಬರಗಾಲ ಇಲ್ಲ, ಬೇಸಿಗೆಯಷ್ಟೇ ಇದೆ ಎಂಬ ಹೇಳಿಕೆ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ವಿವಾದಕ್ಕೆ ಸಿಲುಕಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಸಂದರ್ಭದಲ್ಲಿ ರಾಜ್ಯದಲ್ಲಿ ಬರ ಸ್ಥಿತಿಯಿಲ್ಲ. ಅತ್ಯಂತ ಕಠಿಣ ಬೇಸಿಗೆ ಇರುವುದರಿಂದ ನೀರಿನ ಅಭಾವ ಸೃಷ್ಟಿಯಾಗಿದೆ. ಯಾವಾಗ ಬಿತ್ತನೆ ಸಾಧ್ಯ ಆಗುವುದಿಲ್ಲವೋ ಅಂತಹ ಸಮಯವನ್ನು ಬರಗಾಲ ಎಂದು ಕರೆಯಬಹುದು ಎಂದು ಬರಗಾಲಕ್ಕೆ ಹೊಸ ವ್ಯಾಖ್ಯಾನ ನೀಡಿದರು.
ಸಚಿವ ಎಚ್.ಕೆ.ಪಾಟೀಲ್ ಬರಗಾಲಕ್ಕೆ ಹೊಸ ವ್ಯಾಖ್ಯಾನ ನೀಡಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತ ಮುಖಂಡರು, ರಾಜ್ಯದಲ್ಲಿ ಬರ ಪರಿಸ್ಥಿತಿಯೇ ಇಲ್ಲ ಎನ್ನುವುದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟ ಸಚಿವರು ಬರ ಅಧ್ಯಯನ ಪ್ರವಾಸ ಕೈಗೊಂಡಿದ್ದೇಕೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ರಾಜ್ಯದ ಜನತೆ ಬಿಸಿಲ ಬೇಗೆಯಲ್ಲಿ ಕಂಗೆಟ್ಟಿದ್ದು, ಜನ-ಜಾನುವಾರುಗಳು ನೀರು-ಮೇವಿಲ್ಲದೆ ಸಂಕಷ್ಟಕ್ಕೆ ಸಿಲುಕಿವೆ. ವಾಸ್ತವ ಸ್ಥಿತಿ ಹೀಗಿರುವಾಗ ಸಚಿವರು ಹವಾನಿಯಂತ್ರಿತ ಕಾರಿನಲ್ಲಿ ಕುಳಿತು ಮನಸೋ ಇಚ್ಛೆ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು, ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಜನತೆಯ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ರೈತ ಮುಖಂಡರು ಸಲಹೆ ನೀಡಿದ್ದಾರೆ.







