ಭೀತಿಯ ವಾತಾವರಣದಿಂದ ಮುಕ್ತಿಗೊಳ್ಳುವುದು ಅನಿವಾರ್ಯ: ಸಿಎಂ ಉಮ್ಮನ್ ಚಾಂಡಿ

ಕಾಸರಗೋಡು, ಎ.26: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಉಂಟಾಗಿರುವ ಭೀತಿಯ ವಾತಾವರಣದಿಂದ ಮುಕ್ತಿಗೊಳ್ಳಬೇಕಾದ ಅನಿವಾರ್ಯತೆ ಇದೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷ ಮಾತ್ರ ಧ್ವನಿ ಎತ್ತುತ್ತಿದೆ ಎಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದರು.
ಮಂಗಳವಾರ ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಜನಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸಿಪಿಎಂ ಪಕ್ಷವು ಕೇವಲ ಧ್ವನಿ ಎತ್ತಲು ಮಾತ್ರ ಹೊರತು ಕೋಮುವಾದಿ ಶಕ್ತಿಗಳನ್ನು ತಡೆಯಲು ಮುಂದೆ ಬರುತ್ತಿಲ್ಲ. ಬಿಹಾರದಲ್ಲಿ ನಡೆದ ಚುನಾವಣೆ ಯಲ್ಲಿ ಎಲ್ಲ ಜಾತ್ಯತೀತ ಪಕ್ಷಗಳು ಬಿಜೆಪಿ ವಿರುದ್ಧ ಹೋರಾಡಿದಾಗ ಸಿಪಿಎಂ ಬಿಜೆಪಿಯ ಗೆಲುವಿಗೆ ನಿಂತಿದೆ. ಇಲ್ಲಿ ಸಿಪಿಎಂ ಜಾತ್ಯತೀತ ಪಕ್ಷಗಳ ಒಕ್ಕೂಟದ ಅಭ್ಯರ್ಥಿ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇದರಿಂದ ಸಣ್ಣ ಮತಗಳ ಅಂತರದಿಂದ ಹತ್ತರಷ್ಟು ಸ್ಥಾನಗಳನ್ನು ಒಕ್ಕೂಟ ಕಳೆದುಕೊಳ್ಳಬೇಕಾಯಿತು. ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ನೇತೃತ್ವದ ಪಕ್ಷಗಳು ಮುಂದಾಗುತ್ತಿರುವಾಗ ಸಿಪಿಎಂ ಪಕ್ಷವು ಬಿಜೆಪಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ಅವರು ಆರೋಪಿಸಿದರು.
ಕಾಸರಗೋಡು ನಗರ ಮತ್ತು ಆಸುಪಾಸಿನ ಐದು ಗ್ರಾಪಂ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಎ.28ರಂದು ತಿರುವನಂತಪುರದಲ್ಲಿ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದರು.
ಈ ಪ್ರದೇಶದ ಜನತೆ ಉಪ್ಪುನೀರನ್ನು ಸೇವಿಸಬೇಕಾದ ದುಸ್ಥಿತಿ ಉಂಟಾಗಿದೆ. ಪಯಸ್ವಿನಿ ಹೊಳೆಯಿಂದ ಬಾವಿಕ್ಕರೆ ತಾತ್ಕಾಲಿಕ ಅಣೆಕಟ್ಟು ನಿರ್ಮಿಸಿ ಪೂರೈಕೆಯಾಗುವ ನೀರು ಉಪ್ಪುಮಿಶ್ರಿತವಾಗಿದ್ದು, ವರ್ಷಗಳಿಂದ ಸಮಸ್ಯೆ ತಲೆದೋರುತ್ತಿದ್ದರೂ ಕ್ರಮ ತೆಗೆದುಕೊಳ್ಳದಿರುವುದರಿಂದ ಉಪ್ಪುನೀರನ್ನೇ ಅವಲಂಬಿಸಬೇಕಾಗಿದೆ. ಈ ಕುರಿತು ಪತ್ರಕರ್ತರು ಮುಖ್ಯಮಂತ್ರಿಯವರ ಗಮನಕ್ಕೆ ತಂದಾಗ ಗಂಭೀರವಾಗಿ ಸ್ವೀಕರಿಸಿದ ಅವರು ಎ.28ರಂದು ಸಭೆ ಕರೆದು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಕೆ. ಶ್ರೀಧರನ್, ಬಿ. ಸುಬ್ಬಯ್ಯ ರೈ ಉಪಸ್ಥಿತರಿದ್ದರು.
ಎಡನೀರು ಮಠಕ್ಕೆ ಮುಖ್ಯಮಂತ್ರಿ ಭೇಟಿ
ಮಂಜೇಶ್ವರ, ಎ.26: ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಲ್ಲಿ ಏರ್ಪಡಿಸಿದ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಲು ಕಾಸರಗೋಡಿಗೆ ಸೋಮವಾರ ತಡರಾತ್ರಿ ರೈಲಿನಲ್ಲಿ ಆಗಮಿಸಿದ ಮುಖ ್ಯಮಂತ್ರಿ ಉಮ್ಮನ್ ಚಾಂಡಿ ಮಂಗಳವಾರ ಬೆಳಗ್ಗೆ ಐಕ್ಯರಂಗದ ಮುಖಂಡರೊಂದಿಗೆ ಎಡನೀರು ಮಠಕ್ಕೆ ಭೇಟಿ ನೀಡಿ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯ ಆಶೀರ್ವಾದ ಪಡೆದರು. ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಬಿ. ಸುಬ್ಬಯ್ಯ ರೈ, ಕೇಶವ ಪ್ರಸಾದ ನಾಣಿತ್ತಿಲು, ಬಾಲಕೃಷ್ಣ ವೊರ್ಕೋಡಲ್ಲಿ, ಕೆ. ನೀಲಕಂಠನ್, ಗೋವಿಂದನ್ ನಾಯರ್, ಪಿ.ಎ. ಅಶ್ರಫಲಿ, ಸಿ.ಕೆ. ಶ್ರೀಧರನ್, ಹಕೀಂ ಕುನಿಲ್, ಕರುಣ್ ಥಾಪ್, ಮಾಜಿ ಸಚಿವ ಸಿ.ಟಿ. ಅಹ್ಮದಾಲಿ, ಸಿ.ವಿ ಜೀಮ್ಸ್, ಹಕೀಂ ಕುನಿಲ್, ಕಾಸರಗೋಡು ವಿಧಾನ ಸಭಾ ಕ್ಷೇತ್ರದ ಐಕ್ಯರಂಗದ ಅಭ್ಯರ್ಥಿಎನ್.ಎ . ನೆಲ್ಲಿಕುನ್ನು , ಶಾಂತಾ ಟೀಚರ್ ಎಡನೀರು, ನಾಸಿರ್ ಮೊಗ್ರಾಲ್ ಉಪಸ್ಥಿತರಿದ್ದರು.







