ರೋಟರಿ ವಂದನಾ ಪ್ರಶಸ್ತಿಗೆ ಡಾ.ಶಶಿಕಿರಣ್ ಶೆಟ್ಟಿ ಆಯ್ಕೆ

ಮಂಗಳೂರು, ಎ.26: ರೋಟರಿ ಕ್ಲಬ್ ಮಂಗ ಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಆಶ್ರಯದಲ್ಲಿ ನೀಡಲಾಗುವ ವಂದನಾ ಪ್ರಶಸ್ತಿಗೆ ಮುಂಬೈ ಮೂಲದ ಉದ್ಯಮಿ ಹಾಗೂ ಆಲ್ ಕಾರ್ಗೊ ಲಾಜಿಸ್ಟಿಕ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಡಾ. ಶಶಿಕಿರಣ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಪ್ರಶಸ್ತಿ ಆಯ್ಕೆ ಸಮಿತಿ ಸಭಾಪತಿ ಡಾ.ಬಿ. ದೇವದಾಸ್ ರೈ, ಎ. 29ರಂದು ರಾತ್ರಿ 8ಕ್ಕೆ ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು. ಆರೋಗ್ಯ ಸಚಿವ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಭಿನಂದನಾ ಭಾಷಣ ಮಾಡಲಿರುವರು. ಡಾ. ಶಶಿಕಿರಣ್ ಶೆಟ್ಟಿ ನಗರದ ಖ್ಯಾತ ಎಸ್.ಕೆ.ಎಸ್. ಪ್ಲಾನೆಟ್ ಗಗನಚುಂಬಿ ಅತ್ಯಾಧುನಿಕ ಸೌಲಭ್ಯವುಳ್ಳ 40 ಅಂತಸ್ತಿನ ಮತ್ತು 171 ಐಷಾರಾಮಿ ವಸತಿಗೃಹ ಸಂಕೀರ್ಣ ಪ್ರಾಯೋಜಕರಾಗಿದ್ದಾರೆ. ಹಲವಾರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸಂಘ ಸಂಸ್ಥೆಗಳು ಡಾ. ಶೆಟ್ಟಿಯವರು ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಿದೆ. ಮಂಗಳೂರು ವಿವಿಯಿಂದ ಉದ್ಯಮ ಕ್ಷೇತ್ರದ ಸಾಧನೆ ಹಾಗೂ ಸಮಾಜ ಸೇವೆಗಾಗಿ 2015ನೆ ಸಾಲಿನ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ಅಧ್ಯಕ್ಷ ಇಲಿಯಾಸ್ ಸ್ಯಾಂಕ್ಟಿಸ್, ಮಂಗಳೂರು ಸಿಟಿ ಅಧ್ಯಕ್ಷ ರಾಜೇಶ್ ದೇವಾಡಿಗ ಉಪಸ್ಥಿತರಿದ್ದರು.





