ಸಿಐಡಿ ಎಸ್ಪಿ ಮಧುರವೀಣಾ ವಿರುದ್ಧ ಭ್ರಷ್ಟಾಚಾರ ಆರೋಪ

ಬೆಂಗಳೂರು, ಎ.26: ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿಯೇ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವು ನಾಡಿನ ಜನತೆಗೆ ಅಚ್ಚರಿ ತಂದಿತ್ತು. ಆದರೆ, ಇದೀಗ ಉನ್ನತ ಮಟ್ಟದ ತನಿಖೆಗೆ ಮೀಸಲಾಗಿರುವ ಸಿಐಡಿ ಸಂಸ್ಥೆಯಲ್ಲೂ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.
ಲಂಚ ಪಡೆದ ಪ್ರಕರಣದ ಆರೋಪ ಎದುರಿಸುತ್ತಿರುವ ಸಿಐಡಿ ಎಸ್ಪಿ ಎಂ.ಎಲ್.ಮಧುರವೀಣಾ ಅವರ ವಿರುದ್ಧ ಸಿಐಡಿ ಡಿಐಜಿ ಸೋನಿಯಾ ನಾರಂಗ್ ಅವರು ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರಿಗೆ ವರದಿ ಸಲ್ಲಿಸಿದ್ದಾರೆ. ಸಿಐಡಿ ಎಸ್ಪಿ ಎಂ.ಎಲ್.ಮಧುರವೀಣಾ ಅವರು ವೇಶ್ಯಾವಾಟಿಕೆ ದಂಧೆಯ ನೆಪ ಮಾಡಿ ಖಾಸಗಿ ಹೊಟೇಲ್ ಮೇಲೆ ನಕಲಿ ದಾಳಿ ನಡೆಸಿ ಹಣ ವಸೂಲಿ ಮಾಡಿರುವ ಆರೋಪ ಎದುರಿಸುತ್ತಿದ್ದು, ಈ ಸಂಬಂಧ ಸೋನಿಯಾ ನಾರಂಗ್ ಅವರು ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರಿಗೆ ವರದಿ ಸಲ್ಲಿಸಿದ್ದಾರೆ.
ಏನಿದು ಪ್ರಕರಣ?
ಮಾರ್ಚ್3ರಂದು ಮಧ್ಯಾಹ್ನ ಮಧುರ ವೀಣಾ ನೇತೃತ್ವದಲ್ಲಿ 11 ಮಂದಿ ಬೆಂಗಳೂರಿನ ಶಿವಾಜಿ ನಗರದ ಪ್ರತಿಷ್ಠಿತ ಖಾಸಗಿ ಹೊಟೇಲ್‌ವೊಂದರ ಮೇಲೆ ಉದ್ದೇಶ ಪೂರ್ವಕವಾಗಿ ದಾಳಿ ನಡೆಸಿ, ವೇಶ್ಯಾವಾಟಿಕೆ ಆರೋಪದ ಮೇಲೆ ಸುಳ್ಳು ದೂರು ದಾಖಲಿಸಿ ಕೊಳ್ಳುವ ಬೆದರಿಕೆ ಒಡ್ಡಿ 2 ಲಕ್ಷ ರೂಪಾಯಿ ಲಂಚ ಪಡೆದಿ ದ್ದಾರೆ ಎಂದು ಹೊಟೇಲ್ ಸಿಬ್ಬಂದಿ ಸಿಐಡಿಗೆ ದೂರು ಸಲ್ಲಿಸಿದ್ದರಲ್ಲದೆ, ಲಂಚ ಪಡೆದುದಕ್ಕೆ ಸಾಕ್ಷಿಯಾಗಿ ಸಿಸಿಟಿವಿ ದೃಶ್ಯಾವಳಿಗಳನ್ನೂ ಒದಗಿಸಿದ್ದರು ಎನ್ನಲಾಗಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಡಿಐಜಿ ಸೋನಿಯಾ ನಾರಂಗ್, ಮಾರ್ಚ್ 3ರ ಮಧ್ಯಾಹ್ನ 2:30ರಿಂದ ರಾತ್ರಿ 8:25ರವರೆಗಿನ ಅವಧಿಯಲ್ಲಿ ಹೊಟೇಲ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಗಳೆಲ್ಲವನ್ನೂ ಪರಿಶೀಲಿಸಿದರು.
ಇದರಲ್ಲಿ ಪೊಲೀಸರು ಹಣ ವಸೂಲಿ ಮಾಡಿರುವ ಅಂಶ ಸಾಬೀತಾಗಿದೆ ಎಂದು ತಿಳಿದುಬಂದಿದ್ದು, ಬ್ಯಾಂಕ್ ಖಾತೆಯೊಂದರಿಂದ 2 ಲಕ್ಷ ರೂ. ಪಡೆದುಕೊಂಡಿರುವುದಾಗಿ ಪುರಾವೆಗಳೂ ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಏನೇ ದೂರು ಬಂದರೂ, ಪ್ರಕರಣ ದಾಖಲಾದರೂ, ಘಟನೆ ನಡೆದರೂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಒಂದು ಪುಸ್ತಕದಲ್ಲಿ ಉಲ್ಲೇಖಿಸಬೇಕು. ಆದರೆ, ಇದರಲ್ಲೂ ತಪ್ಪುನಡೆದಿದೆ ಎಂದು ಹೇಳಲಾಗುತ್ತಿದೆ. ತನಿಖೆ ಪೂರ್ಣಗೊಳಿಸಿದ ಬಳಿಕ ಸೋನಿಯಾ ನಾರಂಗ್ ತಮ್ಮ ವರದಿಯನ್ನು ಡಿಜಿಪಿ ಕಿಶೋರ್ ಚಂದ್ರ ಅವರಿಗೆ ಸಲ್ಲಿಸಿದ್ದಾರೆ. ಹೊಟೇಲ್‌ನವರು ಮಾಡಿರುವ ಆರೋಪಗಳನ್ನು ಈ ವರದಿಯಲ್ಲಿ ಪುರಸ್ಕರಿಸಿರುವುದು ತಿಳಿದುಬಂದಿದೆ. ಡಿಜಿಪಿ ಕಿಶೋರ್ ಚಂದ್ರ ಈ ವರದಿಯನ್ನು ಡಿಜಿ-ಐಜಿ ಓಂ ಪ್ರಕಾಶ್ ಅವರಿಗೆ ಕಳುಹಿಸಿದ್ದಾರೆ ಎಂದು ಗೊತ್ತಾಗಿದೆ.







