ಅಪೀಲ್ ಕೋರ್ಟ್ ಅಸಂವಿಧಾನಿಕ, ಬಾಕಿ ಪ್ರಕರಣಗಳತ್ತ ಗಮನ ಕೊಡಿ ಎಂದು ತಿರುಗೇಟು ನೀಡಿದ ಕೇಂದ್ರ
ದುಬಾರಿಯಾಯಿತೆ ಮುಖ್ಯ ನ್ಯಾಯಾಧೀಶರ ಕಣ್ಣೀರು?

ಹೊಸದಿಲ್ಲಿ, ಎ. 27: ಬಾಕಿ ಪ್ರಕರಣಗಳ ಇತ್ಯರ್ಥಪಡಿಸುವ ಸಲುವಾಗಿ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದು ಭಾರತದ ಮುಖ್ಯನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಮನವಿ ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ, ಮಹಾನಗರಗಳಲ್ಲಿ ಅಪೀಲು ಕೋರ್ಟ್ ಆರಂಭಿಸುವ ಪ್ರಸ್ತಾವ ಅಸಂವಿಧಾನಿಕ ಎಂದು ಸ್ಪಷ್ಟಪಡಿಸಿದೆ.
ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ, ಇಂಥ ಅಪೀಲು ನ್ಯಾಯಾಲಯ ಸ್ಥಾಪನೆ ಪ್ರಸ್ತಾವ ಅಪೇಕ್ಷಣೀಯವೂ ಅಲ್ಲ; ಕಾರ್ಯಸಾಧುವೂ ಅಲ್ಲ. ಇದಕ್ಕೆ ಕಾನೂನು ಅಥವಾ ಸಂವಿಧಾನದ ಮನ್ನಣೆ ಇಲ್ಲ ಎಂದು ವಾದ ಮಂಡಿಸಿದರು. ಜತೆಗೆ ಇಂಥ ನ್ಯಾಯಾಲಯಕ್ಕೆ ಅವಕಾಶ ಮಾಡಿಕೊಡಲು ಸುಪ್ರೀಂಕೋರ್ಟ್‌ಗೆ ಯಾವ ಅಧಿಕಾರವಿದೆ ಎಂದು ಪ್ರಶ್ನಿಸಿದರು.
ಇಂಥ ಅಪೀಲು ನ್ಯಾಯಾಲಯಗಳ ಸ್ಥಾಪನೆ ಬಗೆಗಿನ ಚರ್ಚೆಗೆ ಸರ್ಕಾರ ಏಕೆ ಸಿದ್ಧವಿಲ್ಲ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದಾಗ, "ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ. ಹಾಗೊಂದು ವೇಳೆ ಅವುಗಳನ್ನು ರಚಿಸಬೇಕಿದ್ದರೂ ಅದು ಕೇಂದ್ರ ಸರ್ಕಾರದ ನೀತಿ ಹಾಗೂ ಶಾಸನಕ್ಕೆ ಸಂಬಂಧಪಟ್ಟ ವಿಚಾರ" ಎಂದು ಉತ್ತರಿಸಿದರು.
"ಸುಪ್ರೀಂಕೋರ್ಟ್‌ನಲ್ಲಿ ಹೆಚ್ಚು ಪ್ರಕರಣಗಳು ಬಾಕಿ ಇವೆ ಎಂಬ ಕಾರಣಕ್ಕೆ ಇಂಥ ನ್ಯಾಯಾಲಯ ಸ್ಥಾಪನೆ ಮಾಡಲಾಗದು. ಇದು ವಕೀಲರಿಗೆ ಮತ್ತೊಂದು ವೇದಿಕೆಯಾಗುತ್ತದೆಯೇ ವಿನಃ ಬೇರೆ ಯಾವ ಪ್ರಯೋಜನವೂ ಆಗುವುದಿಲ್ಲ. ಸುಪ್ರೀಂ ಕೋರ್ಟ್, ಕೆಳಹಂತದ ನ್ಯಾಯಾಲಯದಲ್ಲಿ ತ್ವರಿತ ನ್ಯಾಯದಾನಕ್ಕೆ ಮುಂದಾಗಬೇಕು. ಕೆಳಹಂತದ ನ್ಯಾಯಾಲಯದಲ್ಲಿ 2 ಕೋಟಿ ಪ್ರಕರಣಗಳು ಬಾಕಿ ಇವೆ. ಇದಕ್ಕೆ ಗಮನ ಹರಿಸಬೇಕೇ ವಿನಃ ಎನ್‌ಸಿಎಗಳು ಇದಕ್ಕೆ ಪರಿಹಾರವಲ್ಲ. ಇದರಿಂದ ಬಾಕಿ ಹೊರೆ ಕಡಿಮೆ ಮಾಡಲು ಪ್ರಯೋಜನವಾಗಬಹುದೇ? ಎಂದು ಪ್ರಶ್ನಿಸಿದರು.
ಈ ಹಂತದಲ್ಲಿ ಮುಖ್ಯನ್ಯಾಯಮೂರ್ತಿ ಠಾಕೂರ್, ನ್ಯಾಯಮೂರ್ತಿಗಳಾದ ಆರ್. ಭಾನುಮತಿ ಹಾಗೂ ಯು.ಯು.ಲಲಿತ್ ಅವರನ್ನು ಒಳಗೊಂಡ ನ್ಯಾಯಪೀಠ, ಈ ಬಗ್ಗೆ ಕೇಂದ್ರಕ್ಕೆ ಯಾವ ನಿರ್ದೇಶನವನ್ನೂ ನೀಡುವುದಿಲ್ಲ. ಈ ಪ್ರಸ್ತಾವದ ಬಗ್ಗೆ ಚರ್ಚೆಗಷ್ಟೇ ಗಮನ ಸೆಳೆಯುತ್ತಿದ್ದೇವೆ ಎಂದು ಸ್ಪಷ್ಟಪಡಿಸಿತು.







