ವಿಶಾಖ ಪಟ್ಟಣದಲ್ಲಿ ಇಂಧನ ಘಟಕದಲ್ಲಿ ಭೀಕರ ಅಗ್ನಿ ದುರಂತ; 8 ಆಯಿಲ್ ಟ್ಯಾಂಕ್ ಗಳು ಸ್ಫೋಟ

ವಿಶಾಖಪಟ್ಟಣ, ಎ.27: ಬಂದರು ನಗರ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಮಂಗಳವಾರ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಜೈವಿಕ ಡೀಸೆಲ್ ತಯಾರಿಕಾ ಘಟಕ ಬೆಂಕಿ ಹೊತ್ತಿಕೊಂಡು 6 ತೈಲ ಟ್ಯಾಂಕ್ ಗಳು ಸ್ಫೋಟಗೊಂಡಿವೆ. ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ವಿಶಾಖಪಟ್ಟಣದ ಹೊರವಲಯದ ದುವ್ವಡದ ವಿಶೇಷ ಆರ್ಥಿಕ ವಲಯದಲ್ಲಿರುವ ಭಾರತದಲ್ಲೇ ಅತ್ಯಂತ ದೊಡ್ಡ ಬಯೋಮ್ಯಾಕ್ಸ್ ಜೈವಿಕ ಡೀಸೆಲ್ ತಯಾರಿಕಾ ಘಟಕದಲ್ಲಿ ಬೆಂಕಿ ದುರಂತ ಸಂಭವಿಸಿತು. .ಘಟಕದಲ್ಲಿ18ಸಂಗ್ರಹಣಾ ಟ್ಯಾಂಕ್ಗಳಿದ್ದವು ಎಂದು ತಿಳಿದುಬಂದಿದೆ. ಈ ಪೈಕಿ 13 ಟ್ಯಾಂಕ್ಗಳಿಗೆ ಬೆಂಕಿ ವ್ಯಾಪಿಸಿದ್ದು, ಈ ಪೈಕಿ 8 ಇಂಧನ ಟ್ಯಾಂಕ್ ಗಳು ಬೆಂಕಿಯ ಕೆನ್ನಾಲಿಗೆಗೆ ಸ್ಫೋಟಗೊಂಡು ಛಿದ್ರಗೊಂಡಿದೆ
ನೌಕಾಪಡೆಯ 12 ಅಗ್ನಿಶಾಮಕ ವಾಹನಗಳು ಸೇರಿದಂತೆ ಒಟ್ಟು 40 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಬೆಂಕಿಯನ್ನು ನಂದಿಸುವ ಕಾರ್ಯಚರಣೆಯಲ್ಲಿ ನಿರತವಾಗಿದೆ.
ಬೆಂಕಿ ಆಕಸ್ಮಿಕ ಸಂಭವಿಸಿದಾಗ ಘಟಕದಲ್ಲಿ 15ನೌಕರರು ಕಾರ್ಯ ನಿರ್ವಹಿಸುತ್ತಿದ್ದರು .ಅವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ ದುರಂತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗುತ್ತಿದ್ದು, ಸುಮಾರು 120 ಕೋಟಿ ರೂ.ಗಳ ನಷ್ಟ ಸಂಭವಿಸಿದೆ ಎಂದು ಅದಿಕೃತ ಮೂಲಗಳು ತಿಳಿಸಿವೆ.







