ಮೀನನ್ನು ರಕ್ಷಿಸಲು ಸಾಧ್ಯವಾಗದ ಮೋದಿಗೆ ದೇಶದ ಗಡಿ ರಕ್ಷಣೆ ಹೇಗೆ ಸಾಧ್ಯ?: ಸೋನಿಯಾ ಗಾಂಧಿ ಪ್ರಶ್ನೆ

ಕ್ಯಾನ್ನಿಂಗ್, ಎ.27: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ದೇಶದ ಗಡಿ ರಕ಼್ಷಣೆಯಲ್ಲಿ ವಿಫಲವಾಗಿದ್ದು, ಭಾರತದ ಸಮುದ್ರದಲ್ಲಿ ವಿದೇಶದ ಮೀನುಗಾರರನ್ನು ಮೀನು ಹಿಡಿಯುವುದನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ದೇಶದ ಮೀನನ್ನು ರಕ್ಷಿಸಲು ಸಾಧ್ಯವಾಗದ ಪ್ರಧಾನಿಗೆ ದೇಶದ ಗಡಿ ರಕ್ಷಣೆ ಹೇಗೆ ಸಾಧ್ಯ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯ ಗಾಂಧಿ ಪ್ರಶ್ನಿಸಿದ್ದಾರೆ.
ಭಾರತದ ಸಮುದ್ರದಲ್ಲಿ ವಿದೇಶಿ ಮೀನುಗಾರರ ಮೀನುಗಾರಿಕೆ ನಿರಂತರವಾಗಿ ಮುಂದುವರಿದಿದೆ. ಇದನ್ನು ನಿಯಂತ್ರಿಸಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗಿಲ್ಲ. ಮೀನನ್ನು ರಕ್ಷಿಸಲು ಸಾಧ್ಯವಾಗದ ಕೇಂದ್ರ ಸರಕಾರ ಗಡಿ ರಕ್ಷಣೆಯಲ್ಲೂ ಎಡವಿದೆ ಎನ್ನುವುದಕ್ಕೆ ಇತ್ತೀಚೆಗೆ ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರ ದಾಳಿ ಪ್ರಕರಣ ಸಾಕ್ಷಿಯಾಗಿದೆ ” ಎಂದು ಸೋನಿಯಾ ಗಾಂಧಿ ದಕ್ಷಿಣ ಇಪ್ಪತ್ತನಾಲ್ಕು ಪರಾಗಣದಲ್ಲಿ ನಡೆದ ಕಾಂಗ್ರೆಸ್‌ನ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಸರಕಾರವು ಮೀನುಗಾರರ ರಕ್ಷಣೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿತ್ತು. ಆದರೆ ಮೋದಿ ಸರಕಾರ ಮೀನುಗಾರರ ನಿರುದ್ಯೋಗಿಗಳನ್ನಾಗಿ ಮಾಡುವ ಕಡೆಗೆ ಗಮನಹರಿಸಿದೆ ಎಂದು ಸೋನಿಯ ಗಾಂಧಿ ಆರೋಪಿಸಿದರು.





