ಸೌದಿ: ವಲಸಿಗರಿಗೆ ಸಂಕಟ, ಪ್ರವಾಸಿಗರಿಗೆ ಸ್ವಾಗತ!

ದುಬೈ: ಸೌದಿ ಅರೇಬಿಯಾ ಕ್ರಾಂತಿಕಾರಕ ರಾಷ್ಟ್ರೀಯ ಸುಧಾರಣಾ ಯೋಜನೆಯನ್ನು ಘೋಷಿಸಿದ್ದು, ದೇಶದ ಶ್ರೀಮಂತ ಪರಂಪರೆ, ಇಸ್ಲಾಮಿಕ್ ಪೂರ್ವದ ತಾಣಗಳನ್ನು ಬಿಂಬಿಸಲು ಮುಂದಾಗಿದೆ. ಪ್ರವಾಸಿ ತಾಣಗಳಿಗೆ ಸ್ಥಳೀಯರು ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ಹಮ್ಮಿಕೊಂಡಿದೆ. ವಿದೇಶಿ ಪ್ರವಾಸಿಗಳನ್ನು ಆಕರ್ಷಿಸುವ ಸಲುವಾಗಿ ಆಯ್ದ ದೇಶಗಳಿಗೆ ಸಾವಿರಾರು ಪ್ರವಾಸಿ ವೀಸಾ ನೀಡಲು ಉದ್ದೇಶಿಸಲಾಗಿದೆ.
ಸೌದಿ ಅರೇಬಿಯಾ ತನ್ನ ವಿಷನ್-2030 ಯೋಜನೆ ಬಿಡುಗಡೆ ಮಾಡಿದ ಮರುದಿನವೇ, ಕೇವಲ ತೈಲ ವಹಿವಾಟಿಗೇ ಅಂಟಿಕೊಳ್ಳದೇ, ಮುಂದಿನ ವರ್ಷಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಕೂಡಾ ಉದ್ದೇಶಿಸಲಾಗಿದೆ ಎಂದು ಪ್ರಿನ್ಸ್ ಸುಲ್ತಾನ್ ಬಿನ್ ಸಲ್ಮನ್ ಪ್ರಕಟಿಸಿದ್ದಾರೆ. ಸುಲ್ತಾನ್ ಬಿನ್ ಸಲ್ಮನ್ ಅವರು, ಪ್ರವಾಸೋದ್ಯಮ ಹಾಗೂ ರಾಷ್ಟ್ರೀಯ ಪರಂಪರೆ ಆಯೋಗದ ಮುಖ್ಯಸ್ಥರಾಗಿದ್ದಾರೆ ಹಾಗೂ ರಾಜ ಸಲ್ಮನ್ ಅವರ ಹಿರಿಯ ಪುತ್ರ. ಆದರೆ ಪ್ರವಾಸೋದ್ಯಮ ಕ್ಷೇತ್ರ ಸಂಪೂರ್ಣ ಮುಕ್ತವಲ್ಲ. ಯಾರು ಬೇಕಾದರೂ ಬರುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
"ಇದು ಸೌದಿಯಲ್ಲಿ ವಹಿವಾಟು ನಡೆಸುವವರಿಗೆ, ಇಲ್ಲಿ ಕೆಲಸ ಮಾಡುವವರಿಗೆ, ಸೌದಿ ಅರೇಬಿಯಾದಲ್ಲಿ ಹೂಡಿಕೆ ಮಾಡುವವರಿಗೆ ಮತ್ತು ವಿಶೇಷ ಉದ್ದೇಶಗಳಿಗಾಗಿ ಭೇಟಿ ನೀಡುವವರಿಗೆ ಸೌದಿ ಮುಕ್ತವಾಗಿದೆ. ಆದರೆ ಇದೀಗ ಆಯ್ದ ಪ್ರವಾಸೋದ್ಯಮಕ್ಕೂ ಮುಕ್ತಗೊಳಿಸಲಾಗುತ್ತಿದೆ ಎಂದು ವಿವರಿಸಿದರು.
ತೀರಾ ಕಟ್ಟುನಿಟ್ಟಿನ ದೇಶ ಎಂದು ಹೆಸರಾಗಿರುವ ಸೌದಿ ಅರೇಬಿಯಾ ಇದುವರೆಗೆ ಪ್ರವಾಸಿ ವೀಸಾ ನೀಡುತ್ತಿಲ್ಲ. ವರ್ಷಕ್ಕೆ 25 ಸಾವಿರ ಮಂದಿಯನ್ನು ದೇಶಕ್ಕೆ ಭೇಟಿ ನೀಡಲು ಅವಕಾಶ ನೀಡುವ ಪ್ರಾಯೋಗಿಕ ಯೋಜನೆಯನ್ನು 2006ರಿಂದ 2010ರವರೆಗೆ ಜಾರಿಗೊಳಿಸಿತ್ತು. ಸೌದಿ ಅರೇಬಿಯಾದ ಪ್ರಾಚೀನ ಸ್ಥಳಗಳು ಹಾಗೂ ಪರ್ವತಶ್ರೇಣಿ, ಕಡಲತೀರ, ಮರಭೂಮಿಗಳನ್ನು ವೀಕ್ಷಿಸಲು ಪ್ರವಾಸಿಗರನ್ನು ಆಕರ್ಷಿಸಲು ಇದೀಗ ಉದ್ದೇಶಿಸಿದೆ. ಆದರೆ ಯಾವ ದಿನಾಂಕದಿಂದ ವೀಸಾ ನೀಡಲಾಗುತ್ತದೆ ಎಂದು ಪ್ರಕಟಿಸಿಲ್ಲ.
ಸಾಕಷ್ಟು ಪಾರಂಪರಿಕ ತಾಣಗಳನ್ನು ಹೊಂದಿದ್ದರೂ ಪ್ರವಾಸಿ ಆಕರ್ಷಣೆಯ ಕೇಂದ್ರವಾಗಿ ಇದುವರೆಗೆ ಸೌದಿ ಬೆಳೆದಿಲ್ಲ. ಇದೀಗ ವಿಷನ್-2030 ಅನ್ವಯ ಕಡಿಮೆ ತೈಲಬೆಲೆಯ ಯುಗದ ಸವಾಲನ್ನು ಎದುರಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದೆ. ತೈಲಬೆಲೆ ಕುಸಿತದಿಂದಾಗಿ ಸಬ್ಸಿಡಿ, ವೇತನ ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ಹೂಡಿಕೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಶೇಕಡ 70ರಷ್ಟು ಮಂದಿ ಸೌದಿ ಸರ್ಕಾರಿ ಉದ್ಯೋಗದಲ್ಲಿದ್ದು, ಇವರಲ್ಲಿ ಅರ್ಧಕ್ಕಿಂತ ಹೆಚ್ಚಿನ ಮಂದಿ 25 ವಯಸ್ಸಿನೊಳಗಿನವರು. ಲಕ್ಷಾಂತರ ಮಂದಿ ಇನ್ನು ಕೂಡಾ ಉದ್ಯೋಗ ಹಾಗೂ ಕೈಗೆಟುಕುವ ದರದಲ್ಲಿ ಮನೆಗಾಗಿ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ವಿಶ್ವಾಸ ಮೂಡಿಸಿದ ಕ್ಷೇತ್ರವಾಗಿದೆ ಎಂದು ರಾಜಕುಮಾರ ಸುಲ್ತಾನ್ ಹೇಳಿದ್ದಾರೆ.







