ಮುಸ್ಲಿಂ ವಲಸಿಗರಿಗೆ ನಿಷೇಧ ಹೇರುವ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಪ್ರಿಯಾಂಕ ಚೋಪ್ರ ತಿರುಗೇಟು

ವಾಶಿಂಗ್ಟನ್ , ಎ. 27 : ಖ್ಯಾತ ಬಾಲಿವುಡ್ ನಟಿ , ಈಗ ಹಾಲಿವುಡ್ ನಲ್ಲೂ ಹೆಸರು ಗಳಿಸಿರುವ ಭಾರತದ ಪ್ರಿಯಾಂಕ ಚೋಪ್ರ ಅವರು ಮುಸ್ಲಿಂ ವಲಸಿಗರಿಗೆ ನಿಷೇಧ ಹೇರುವ ರಿಪಬ್ಲಿಕನ್ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
" ನನ್ನ ಪ್ರಕಾರ ನೀವು ಯಾರಿಗೂ ನಿಷೇಧ ಹೇರಲು ಸಾಧ್ಯವಿಲ್ಲ. ಒಂದು ಆರೋಪವನ್ನು ಎಲ್ಲರ ಮೇಲೂ ಸಾರಾಸಗಟಾಗಿ ಹಾಕಿ ಬಿಡುವುದು ಪ್ರಾಚೀನ ಪದ್ಧತಿಯಾಗಿದೆ " ಎಂದು ಅವರು ಸ್ಪಷ್ಟವಾಗಿ ಟ್ರಂಪ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಭಯೋತ್ಪಾದನೆಯ ವಿರುದ್ಧದ ಹೋರಾಟ ಈಗ ಅತ್ಯಂತ ಸಂಕೀರ್ನಗೊಂಡಿದ್ದು " ಅದಕ್ಕೆ ಒಂದು ನಿರ್ದಿಷ್ಟ ಮುಖವನ್ನು ನೀವು ನೀಡಲು ಸಾಧ್ಯವಾಗುವುದಿಲ್ಲ " ಎಂದು ಪ್ರಿಯಾಂಕ ಹೇಳುವ ಮೂಲಕ ದಿಟ್ಟ ಹೇಳಿಕೆ ನೀಡಿದ್ದಾರೆ.
'ಕ್ವಾನ್ಟಿಕೋ' ಸರಣಿಯ ಮೂಲಕ ಹಾಲಿವುಡ್ ನಲ್ಲಿ ಖ್ಯಾತರಾದ ಮಿಸ್ ವರ್ಲ್ಡ್ ಪ್ರಿಯಾಂಕ ಈಗ ಪ್ರಖ್ಯಾತ 'ಬೇ ವಾಚ್' ಚಿತ್ರದಲ್ಲಿ ಪ್ರಮುಖ ಪಾತ್ರ ಪಡೆದಿದ್ದಾರೆ.
Next Story





