ವೇತನ ಹೆಚ್ಚಳ ಆಗ್ರಹಿಸಿ ಸಿ.ಎಂ.ಗೆ ಬರೆದ ಪತ್ರವನ್ನು ಫೇಸ್ ಬುಕ್ ಗೆ ಹಾಕಿದ ಪೋಲಿಸ್ ಪೇದೆ
ನೋಟಿಸ್ ಜಾರಿ ಮಾಡಿದ ಇಲಾಖೆ

ಇಂದೋರ್ : ಪೊಲೀಸ್ ಸಿಬ್ಬಂದಿಗಳ ವೇತನ ಹೆಚ್ಚಿಸಬೇಕೆಂದು ಆಗ್ರಹಿಸಿಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ಅವರಿಗೆ ತಾನು ಬರೆದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದತಪ್ಪಿಗಾಗಿ28 ವರ್ಷದ ಪೊಲೀಸ್ ಕಾನ್ಸ್ಟೇಬಲ್ ಒಬ್ಬನ ವಿರುದ್ಧ ಶಿಸ್ತು ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.
ಪೊಲೀಸ್ ಸಿಬ್ಬಂದಿಗಳು ತಮ್ಮ ಕುಟುಂಬಗಳನ್ನು ಸಲಹಲು ಸಾಕಾಗುವಷ್ಟು ವೇತನ ಅವರಿಗೆ ಒದಗಿಸಬೇಕೆಂದುಬುರ್ಹಾನ್ನ್ ಪುರದಲ್ಲಿ ಸೇವೆ ಸಲ್ಲಿಸುತ್ತಿರುವ ಸೂರಜ್ ಸಿಂಗ್ ಚುಂಡಾವತ್ ತಾನು ಬರೆದ ಪತ್ರವನ್ನುಎಪ್ರಿಲ್ 21ರಂದು ಪೋಸ್ಟ್ ಮಾಡಿದ್ದರು. ಫೇಸ್ಬುಕ್ ನಲ್ಲಿ ಸಾಕಷ್ಟು ಲೈಕ್ ಹಾಗೂ ಶೇರ್ ಪಡೆದ ಈ ಪತ್ರ ನಂತರ ವಾಟ್ಸೆಪ್ ನಲ್ಲಿ ಕೂಡ ಜನಪ್ರಿಯವಾಯಿತಲ್ಲದೆ ಪೊಲೀಸ್ ಇಲಾಖೆಯ ಗಮನಕ್ಕೂ ಬಂದು ಈ ಕೃತ್ಯಕ್ಕೆ ಅದು ಆತನಿಂದ ವಿವರಣೆ ಕೇಳಿದೆ.
ಚೌಹಾಣ್ ಅವರ ಆಡಳಿತಾವಧಿಯಲ್ಲಿ ದಾಖಲಿಸಿದಪ್ರಗತಿಯನ್ನು ತನ್ನ ಪತ್ರದಲ್ಲಿ ಚುಂಡಾವತ್ ಶ್ಲಾಘಿಸಿದರೂ ‘‘ಪೊಲೀಸ್ ಸಿಬ್ಬಂದಿಯಾಗಿರುವುದು ಒಂದು ಅಪರಾಧವೇ?’’ಎಂದು ಅವರನ್ನು ಪ್ರಶ್ನಿಸಿದ್ದಾರೆ. ‘‘ನಾವು ತುಂಬ ಕಡಿಮೆ ವೇತನಕ್ಕೆ ದುಡಿಯುತ್ತಿದ್ದೇವೆ, ನಮ್ಮ ಕುಟುಂಬಗಳಿಂದ ದೂರವಿರುತ್ತೇವೆ ಹಾಗೂ ಹೆಚ್ಚಿನ ಸಂದರ್ಭಗಳಲ್ಲಿ ಸರಿಯಾದ ಸಮಯ ಆಹಾರ ಕೂಡ ಸೇವಿಸುತ್ತಿಲ್ಲ. ಹೀಗಿರುವಾಗ ನಮ್ಮ ವೇತನ ಹೆಚ್ಚಿಸುವ ವಿಷಯ ಬಂದಾಗ ಹಣಕಾಸಿನ ಕೊರತೆಯ ಸಮಸ್ಯೆಯನ್ನು ಮುಂದಿಡಲಾಗುತ್ತದೆ. ನಮಗೆ ಸಿಗುವ ವೇತನ ಇಬ್ಬರ ಹೊಟ್ಟೆಗೆಸಾಕಾಗದು,’’ಎಂದು ಅವರು ಬರೆದಿದ್ದಾರೆ.
‘‘ಇಂತಹ ಒಂದು ಪತ್ರವನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡುವುದು ಮಧ್ಯಪ್ರದೇಶ ಸಿವಿಲ್ ಸರ್ವಿಸ್ ನಿಯಮಗಳ ಉಲ್ಲಂಘನೆಯಾಗಿದೆ. ಈ ವಿಚಾರದ ಬಗ್ಗೆ ಅವರಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಲಾಗಿದೆ,’’ಎಂದು ಬುರ್ಹಾನ್ನ್ ಪುರ ಎಸ್ಪಿ ಅನಿಲ್ ಸಿಂಗ್ ಕುಶ್ವಹ ಹೇಳಿದ್ದಾರೆ.
ಕಾನ್ಸ್ಟೇಬಲ್ ಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸುವ ಹಕ್ಕಿದ್ದರೂ ಪೊಲೀಸ್ ಇಲಾಖೆ ಒಂದು ಶಿಸ್ತುಬದ್ಧ ಇಲಾಖೆಯಾಗಿರುವುದರಿಂದ ಸಿಬ್ಬಂದಿಗಳು ತಮ್ಮ ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ಸರಿಯಾದ ವೇದಿಕೆಯಲ್ಲಿ ಎತ್ತಬೇಕು,’’ಎಂದವರು ಹೇಳಿದರು.







