ಮಂಗಳೂರಿನಲ್ಲಿ ನಿಷೇಧವಿಲ್ಲದ ಪ್ಲಾಸ್ಟಿಕ್ ಸಾಮಗ್ರಿಗಳೂ ವಶಕ್ಕೆ: ಸಂಕಷ್ಟದಲ್ಲಿ ವ್ಯಾಪಾರಿಗಳು
ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಷೇಧ ಹಿನ್ನ್ನೆಲೆ

ಗಳೂರು,ಎ.27: ರಾಜ್ಯದಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳ ನಿಷೇಧದ ಆದೇಶ ಜಾರಿಗೆ ಹೊರಟ ಅಧಿಕಾರಿಗಳು ನಿಷೇಧವಿಲ್ಲದ ಪ್ಲಾಸ್ಟಿಕ್‌ಗಳನ್ನು ವಶಕ್ಕೆ ಪಡೆದುಕೊಂಡು ಮಂಗಳೂರಿನಲ್ಲಿ ಪ್ಲಾಸ್ಟಿಕ್ ವ್ಯಾಪಾರಿಗಳನ್ನು ಸಂಕಷ್ಟಕ್ಕೀಡು ಮಾಡಿದ್ದಾರೆ.
ರಾಜ್ಯದಲ್ಲಿ ಎ.15 ರಿಂದ ಎಲ್ಲಾ ರೀತಿಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳ ಬಳಕೆಗೆ ನಿಷೇಧವಿದೆ. ಕೇಂದ್ರದ ಹೊಸ ಆದೇಶದ ಪ್ರಕಾರ 50 ಮೈಕ್ರಾನ್‌ಗಿಂತ ಹೆಚ್ಚಿನ ಕ್ಯಾರಿಬ್ಯಾಗ್ ಬಳಕೆಗೆ ಅವಕಾಶವಿದ್ದರೂ ರಾಜ್ಯ ಸರಕಾರದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಷೇಧದ ಪ್ರಕಾರ ಎಲ್ಲಾ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳು ನಿಷೇಧಿಸಲ್ಪಟಿವೆ. ಜೊತೆಗೆ ಪ್ಲಾಸ್ಟಿಕ್ ಕಪ್, ಪ್ಲಾಸ್ಟಿಕ್ ಸ್ಪೂನ್ , ಪ್ಲಾಸ್ಟಿಕ್ ಪ್ಲೇಟ್‌ಗಳು , ಫ್ಲೆಕ್ಸ್, ಪ್ಲಾಸ್ಟಿಕ್ ಬಂಟಿಂಗ್ಸ್‌ಗಳಿಗೆ ನಿಷೇಧವಾಗಿದೆ.
ಆದರೆ ಮಂಗಳೂರು ಮಹಾನಗರದಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಷೇಧದ ಆದೇಶವನ್ನಿಟ್ಟುಕೊಂಡು ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳ ತಪಾಸಣೆ ನಡೆಸುತ್ತಿರುವ ಕೆಲವೊಂದು ಅಧಿಕಾರಿಗಳು ನಿಯಮವನ್ನು ಗಾಳಿಗೆ ತೂರಿ ಪ್ಲಾಸ್ಟಿಕ್ ವಸ್ತುಗಳ ವಶಪಡಿಸಿಕೊಳ್ಳುತ್ತಿದ್ದಾರೆ. ಪ್ಯಾಕಿಂಗ್ ಮಾಡುವಂತಹ ಪ್ಲಾಸ್ಟಿಕ್‌ಗಳು ನಿಷೇಧದ ಪಟ್ಟಿಯಲ್ಲಿ ಇಲ್ಲದೆ ಇದ್ದರೂ ನಗರದ ಬಂದರ್‌ನಲ್ಲಿ ಬುಧವಾರ ದಾಳಿ ನಡೆಸಿದ ಮನಪಾದ ಅಧಿಕಾರಿಗಳು ಎಲ್ಲಾ ರೀತಿಯ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬುದು ಪ್ಲಾಸ್ಟಿಕ್ ವರ್ತಕರ ಅಳಲು.
ಎನ್‌ಜಿಟಿ ನಿರ್ದೇಶನ ಪಾಲನೆಯಾಗುತ್ತಿಲ್ಲ:
ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿರುವುದರಿಂದ ಅಧಿಕಾರಿಗಳು ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ವಶಪಡಿಸಿಕೊಳ್ಳುವ ರೀತಿಯ ಬಗ್ಗೆ ಕೆಲವೊಂದು ನಿರ್ದೇಶನಗಳನ್ನು ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ (ಎನ್‌ಜಿಟಿ) ನೀಡಿದೆ. ಆದರೆ ಮಂಗಳೂರಿನಲ್ಲಿ ಎನ್ ಜಿ ಟಿ ನೀಡಿದ ನಿರ್ದೇಶನಗಳನ್ನು ಪಾಲಿಸಲಾಗುತ್ತಿಲ್ಲ ಎಂಬ ಆರೋಪವಿದೆ. ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಅಧಿಕಾರಿಗಳು ಯಾವೆಲ್ಲ ವಸ್ತುಗಳನ್ನು, ಎಷ್ಟು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಹಜರು ನಡೆಸಬೇಕು ಮತ್ತು ಯಾವುದೆ ಕಾರಣಕ್ಕೂ ಹಿಂಸೆಯನ್ನು ನೀಡಬಾರದು ಎಂಬ ಆದೇಶವಿದೆ. ಈ ಆದೇಶವಿದ್ದರೂ ದಾಳಿ ನಡೆಸುವ ಅಧಿಕಾರಿಗಳು ಈ ನಿರ್ದೇಶನವನ್ನು ಪಾಲಿಸುತ್ತಿಲ್ಲ ಎಂಬ ಆರೋಪವನ್ನು ವರ್ತಕರು ಮಾಡುತ್ತಿದ್ದಾರೆ.
ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ದೂರು
ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳಿಗೆ ನಿಷೇಧವಿರುವುದರಿಂದ ದಾಳಿ ಮಾಡುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ನಿಷೇಧವಿಲ್ಲದೆ ಇರುವ ಹಲವು ಬಗೆಯ ಪ್ಲಾಸ್ಟಿಕ್‌ಗಳನ್ನು ಕೊಂಡು ಹೋಗುತ್ತಿರುವುದು ತಪ್ಪು. ಈ ಬಗ್ಗೆ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್‌ಗೆ ನಾವು ದೂರನ್ನು ನೀಡುತ್ತೇವೆ.
-ಬಿ.ಎ.ನಝೀರ್, ಅಧ್ಯಕ್ಷರು, ಕೆನರಾ ಪ್ಲಾಸ್ಟಿಕ್ ಮ್ಯಾನ್ಯಪ್ಯಾಕ್ಚರ್ ಆ್ಯಂಡ್ ಟ್ರೇಡ್ರ್ ಅಸೋಸಿಯೇಶನ್
ಎಲ್ಲಾ ರೀತಿಯ ಪ್ಲಾಸ್ಟಿಕ್ ಬ್ಯಾಗ್‌ಗಳು ನಿಷೇಧವಾಗಿದೆ. ಆದರೆ ಪ್ಯಾಕಿಂಗ್ ಮಾಡುವ ಪ್ಲಾಸ್ಟಿಕ್ ಉತ್ಪನ್ನಗಳಿಗೆ ನಿಷೇಧವಿಲ್ಲ.ನಿಷೇಧವಿಲ್ಲದೆ ಇರುವ ಇಂತಹ ಪ್ಯಾಕಿಂಗ್ ಮಾಡುವ ಪ್ಲಾಸ್ಟಿಕ್ ಬಳಸುವುದಕ್ಕೆ ಯಾವುದೆ ತೊಂದರೆಯಿಲ್ಲ.
- ರಾಜಶೇಖರ್ ಪುರಾಣಿಕ್,ಅಧಿಕಾರಿ , ಕರ್ನಾಟಕ ರಾಜ್ಯ ಮಾಲೀನ್ಯ ನಿಯಂತ್ರಣ ಇಲಾಖೆ


















