ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಮುಂದುವರಿಕೆ
ನಾಳೆ ಬಲಾಬಲ ಪರೀಕ್ಷೆ ಇಲ್ಲ

ಕೇಂದ್ರದ ಮುಂದೆ ಏಳು ಕಠಿಣ ಪ್ರಶ್ನೆಗಳನಿಟ್ಟ ಸರ್ವೋಚ್ಚ ನ್ಯಾಯಾಲಯ
ಹೊಸದಿಲ್ಲಿ,ಎ.27: ರಾಷ್ಟ್ರಪತಿ ಆಡಳಿತವನ್ನು ರದ್ದುಗೊಳಿಸಿದ್ದ ನೈನಿತಾಲ್ ಉಚ್ಚ ನ್ಯಾಯಾಲಯದ ಆದೇಶಕ್ಕೆ ತಾನು ನೀಡಿದ್ದ ತಡೆಯಾಜ್ಞೆಯ ಅವಧಿಯನ್ನು ಬುಧವಾರ ಸರ್ವೋಚ್ಚ ನ್ಯಾಯಾಲಯವು ವಿಸ್ತರಿಸಿದೆ. ಇದರಿಂದಾಗಿ ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಸದ್ಯಕ್ಕೆ ಮುಂದುವರಿಯಲಿದೆ ಮತ್ತು ಉಚ್ಚ ನ್ಯಾಯಾಲಯವು ಆದೇಶಿಸಿದ್ದಂತೆ ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆ ನಡೆಯುವುದಿಲ್ಲ.
ರಾಷ್ಟ್ರಪತಿ ಆಡಳಿತ ಹೇರಿಕೆಯನ್ನು ರದ್ದುಗೊಳಿಸಿರುವ ಉತ್ತರಾಖಂಡ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಕೇಂದ್ರದ ಮೇಲ್ಮನವಿಯ ವಿಚಾರಣೆಯನ್ನು ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯವು ಏಳು ಕಠಿಣ ಪ್ರಶ್ನೆಗಳನ್ನು ಮುಂದಿರಿಸಿತಲ್ಲದೆ, ಸರಕಾರವು ಉತ್ತರಿಸಲು ಬಯಸುವ ಇತರ ಪ್ರಶ್ನೆಗಳನ್ನು ಈ ಪಟ್ಟಿಗೆ ಸೇರಿಸಲು ಅಟಾರ್ನಿ ಜನರಲ್ ಅವರಿಗೆ ಸ್ಯಾತಂತ್ರವನ್ನು ನೀಡಿತು.
ಮುಂದಿನ ತಿಂಗಳು ನ್ಯಾಯಾಲಯಕ್ಕೆ ಬೇಸಿಗೆ ರಜೆ ಆರಂಭಗೊಳ್ಳುವ ಮುನ್ನ ತೀರ್ಪು ಪ್ರಕಟಗೊಳ್ಳಬಹುದು ಎಂಬ ಸುಳಿವುಗಳ ನಡುವೆಯೇ ನ್ಯಾಯಮೂರ್ತಿಗಳಾದ ದೀಪಕ ಮಿಶ್ರಾ ಮತ್ತು ಶಿವಕೀರ್ತಿ ಸಿಂಗ್ ಅವರನ್ನೊಳಗೊಂಡ ಪೀಠವು ಮುಂದಿನ ವಿಚಾರಣೆಯನ್ನು ಮೇ 3ಕ್ಕೆ ನಿಗದಿಗೊಳಿಸಿತು. ವಾದಿ-ಪ್ರತಿವಾದಿಗಳ ಒಪ್ಪಿಗೆಯ ಮೇರೆಗೆ ಉತ್ತರಾಖಂಡ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆಯನ್ನು ಮುಂದಿನ ಆದೇಶದವರೆಗೆ ತಾನು ವಿಸ್ತರಿಸುತ್ತಿರುವುದಾಗಿ ಪೀಠವು ಸ್ಪಷ್ಟಪಡಿಸಿತು.
ಹರೀಶ ರಾವತ್ ಪರ ಹಿರಿಯ ವಕೀಲ ಅಭಿಷೇಕ ಮನು ಸಿಂಘ್ವಿ ಅವರು ಉಚ್ಚ ನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆಯನ್ನು ಇನ್ನೂ ಕೆಲವು ದಿನಗಳ ಕಾಲ ಮುಂದುವರಿಸುವ ಪೀಠದ ನಿಲುವನ್ನು ವಿರೋಧಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಪ್ರಸಕ್ತ ಸ್ಥಿತಿಗೆ ಅಂತಿಮವಾಗಿ ಸದನದಲ್ಲಿ ಬಲಾಬಲ ಪರೀಕ್ಷೆಯೇ ಉತ್ತರವಾಗುವ ಸಾಧ್ಯತೆಯಿದೆ ಎಂದು ವಿಚಾರಣೆ ವೇಳೆ ಹೇಳಿದ ಪೀಠವು, ತಾನು ಮುಂದಿಟ್ಟಿರುವ ಪ್ರಶ್ನೆಗಳು ಮತ್ತು ಸಲಹೆಗಳ ಬಗ್ಗೆ ಆಲೋಚಿಸುವಂತೆ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರಿಗೆ ಸೂಚಿಸಿತು. ವಿಷಯವು ತನ್ನದೇ ಆದ ಗಂಭೀರತೆಯನ್ನು ಹೊಂದಿದೆ ಮತ್ತು ಅಂತಿಮವಾಗಿ ಇಂತಹ ಪ್ರಕರಣದಲ್ಲಿ ಮೇಲ್ನೋಟಕ್ಕೆ ನಾವು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕಾಗಿದೆ. ಹೀಗಾಗಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಅರ್ಥವಿಲ್ಲ ಎಂದು ನಾವು ಪರಿಗಣಿಸಿದರೆ ಸದನದಲ್ಲಿ ಬಲಾಬಲ ಪರೀಕ್ಷೆಗೆ ನಾವು ಆದೇಶಿಸಬೇಕಾಗುತ್ತದೆ. ಆದ್ದರಿಂದ ಸಾಂವಿಧಾನಿಕ ಪರಿಕಲ್ಪನೆಯಾಗಿ,ನಾವು ನಿಜಕ್ಕೂ ನಮ್ಮ ಆದೇಶವನ್ನು ತೆರವುಗೊಳಿಸದಿದ್ದರೆ ನಾವು ನಮ್ಮ ಆದೇಶವನ್ನು ಪರಿಷ್ಕರಿಸಬೇಕಾಗುತ್ತದೆ ಮತ್ತು ಬಲಾಬಲ ಪರೀಕ್ಷೆಗೆ ಸೂಚಿಸಬೇಕಾಗುತ್ತದೆ. ಈ ಬಗ್ಗೆ ಯೋಚಿಸಿ ಎಂದು ಪೀಠವು ಹೇಳಿತು. ಈ ಬಗ್ಗೆ ತಾನು ಆಲೋಚಿಸಿ ನ್ಯಾಯಾಲಯಕ್ಕೆ ತಿಳಿಸುವುದಾಗಿ ರೋಹಟ್ಗಿ ಹೇಳಿದರು. ಇದು ತುರ್ತಿನ ಪರಿಸ್ಥಿತಿಯಾಗಿದೆ ಎಂದೂ ನ್ಯಾಯಾಲಯವು ಹೇಳಿತು.ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದ ರೋಹಟ್ಗಿ ಅವರು,ರಾಷ್ಟ್ರಪತಿ ಆಡಳಿತವು ಮೇ 27ರವರೆಗೆ ಎರಡು ತಿಂಗಳು ಊರ್ಜಿತದಲ್ಲಿರುತ್ತದೆ ಮತ್ತು ಅದನ್ನು ನ್ಯಾಯಾಲಯವು ಎತ್ತಿ ಹಿಡಿದರೆ ಬಲಾಬಲ ಪರೀಕ್ಷೆ ನಡೆಸುವುದು ಸರಕಾರದ ವಿವೇಚನಾಧಿಕಾರವಾಗಿರುತ್ತದೆ. ರಾಷ್ಟ್ರಪತಿ ಆಡಳಿತವನ್ನು ವಜಾಗೊಳಿಸಿದರೆ ಆಗ ಕೇಂದ್ರದ ಆಳ್ವಿಕೆ ಇರುವುದಿಲ್ಲ ಮತ್ತು ಅಂತಹ ಸಂದರ್ಭದಲ್ಲಿ ಸದನದಲ್ಲಿ ಬಲಾಬಲ ಪರೀಕ್ಷೆಗೆ ಕರೆ ನೀಡುವಂತೆ ರಾಜ್ಯಪಾಲರಿಗೆ ನಿರ್ದೇಶವಿರುತ್ತದೆ ಎಂದು ಹೇಳಿದರು. ಈ ವಿಷಯದಲ್ಲಿ ತನ್ನ ಅಭಿಪ್ರಾಯಗಳನ್ನು ನ್ಯಾಯಾಲಯದ ಮುಂದಿರಿಸಲು ಅವಕಾಶ ನೀಡಬೇಕು ಎಂಬ ಉತ್ತರಾಖಂಡ ಮುಖ್ಯ ಕಾರ್ಯದರ್ಶಿಗಳ ಮನವಿಯ ಕುರಿತಂತೆ ಪೀಠವು,ಅವರೇನು ಮಾಡುತ್ತಾರೆ? ಅವರಿಗೂ ಈ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಯಾವ ಬಗೆಯ ಪ್ರಮಾಣಪತ್ರ ಸಲ್ಲಿಸಲಿದ್ದಾರೆ ಎಂದು ಕುಟುಕಿತು.







