ಜೆಎನ್‌ಯು ವಿವಾದ: ತನಿಖೆ ಸಮಿತಿಯ ವರದಿ ಸುಟ್ಟ ವಿದ್ಯಾರ್ಥಿಗಳು

ಹೊಸದಿಲ್ಲಿ, ಎ.27: ಸಂಸತ್ ಭವನ ದಾಳಿಯ ಅಪರಾಧಿ ಅಫ್ಝಲ್ ಗುರುವನ್ನು ಬೆಂಬಲಿಸಿ ಜೆಎನ್‌ಯು ಆವರಣದಲ್ಲಿ ಫೆ.9ರಂದು ನಡೆಸಿದ್ದ ಕಾರ್ಯಕ್ರಮದ ಸಂಬಂಧ ತನಿಖೆಗೆಂದು ವಿವಿ ನೇಮಿಸಿದ್ದ ಸಮಿತಿಯ ತೀರ್ಪನ್ನು ವಿದ್ಯಾರ್ಥಿಗಳು ತಿರಸ್ಕರಿಸಿದ್ದಾರೆಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸೇರಿ ಶಿಕ್ಷೆಯ ಪ್ರಮಾಣ ಘೋಷಿಸಿದ್ದ ಸಮಿತಿಯ ವರದಿಯನ್ನು ಸುಟ್ಟಿದ್ದಾರೆ. ಸಮಿತಿ ಹಾಗೂ ಅದರ ವರದಿಯನ್ನು ಪ್ರತಿಭಟಿಸಿ ಬುಧವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸುವ ನಿರ್ಧಾರವನ್ನು ಅವರು ಪ್ರಕಟಿಸಿದ್ದಾರೆ.
ಸಮಿತಿಯ ರಚನೆಯಾದಂದಿನಿಂದಲೇ ಅದು ಅಪ್ರಜಾಸತ್ತಾತ್ಮಕ ಹಾಗೂ ತಾರತಮ್ಯದಿಂದ ಕೂಡಿದುದೆಂದು ಹೇಳುತ್ತ ಬಂದಿದ್ದೇವೆ. ಅದರ ತೀರ್ಪನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಅದು ಜಾತಿವಾದಿ ಹಾಗೂ ಮೀಸಲಾತಿ ವಿರೋಧಿಯಾಗಿದೆಯೆಂದು ಜೆನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಆರೋಪಿಸಿದ್ದಾರೆ.
ಯಾವ ವಿದ್ಯಾರ್ಥಿಯೂ ದಂಡ ಪಾವತಿಸುವುದಿಲ್ಲ ಹಾಗೂ ಹಾಸ್ಟೆಲ್ ತೆರವುಗೊಳಿಸುವುದಿಲ್ಲ. ತಾವು ತನಿಖೆ ಸಮಿತಿಯ ಮೇಲೆ ವಿಶ್ವಾಸವಿಲ್ಲವೆಂದು ಆರಂಭದಿಂದಲೂ ಹೇಳುತ್ತ ಬಂದಿದ್ದೇವೆ. ಅದು ಪುನಾರಚನೆಯಾಗಬೇಕು. ಶಿಕ್ಷೆಯ ಆದೇಶವನ್ನು ವಿವಿ ಆಡಳಿತ ಹಿಂದೆಗೆಯಬೇಕೆಂದು ತಾವು ಆಗ್ರಹಿಸುತ್ತಿದ್ದೇವೆಂದು ಉಪಾಧ್ಯಕ್ಷೆ ಶೆಹ್ಲಾ ರಶೀದಾ ಶೋರಾ ಹೇಳಿದ್ದಾರೆ.







