ಬರದ ಪರಿಸ್ಥಿತಿ ಎದುರಿಸಲು ಸರಕಾರ ಸಿದ್ಧ: ಪರಮೇಶ್ವರ್

ಚಿಕ್ಕಮಗಳೂರು, ಎ.27: ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಬರಗಾಲ ಆವರಿಸಿದ್ದು, ಇದನ್ನು ಎದುರಿಸಲು ರಾಜ್ಯ ಸರಕಾರ ಸಕಲ ಪ್ರಯತ್ನ ನಡೆಸಿದೆಯಾದರೂ ಎಲ್ಲರ ಸಹಕಾರ ಅಗತ್ಯ ಎಂದು ಸರಕಾರದ ಪರವಾಗಿ ಜಿಲ್ಲಾ ಉಸ್ತು ವಾರಿ ಸಚಿವ ಡಾ. ಜಿ. ಪರಮೇಶ್ವರ್ ಮನವಿ ಮಾಡಿದ್ದಾರೆ.
ಅವರು ಕಡೂರು ತಾಲೂಕಿನಲ್ಲಿ ವಿವಿಧ ಬರ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದ ಸಂದರ್ಭ ದಲ್ಲಿ ಸಿಂಗಟಗರೆಯಲ್ಲಿ ಮಾತಾನಾಡಿದರು.
ಕಳೆದ 40 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಅಂತ್ಯಂತ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಈ ಸಂದಭರ್ದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಲು ಸರಕಾರ ಎಲ್ಲ ಪ್ರಯತ್ನಗಳನ್ನು ನಡೆಸಿದೆ. ಸ್ವತಃ ಮುಖ್ಯ ಮಂತ್ರಿಗಳೇ ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ರಾಜ್ಯದಲ್ಲಿ ನಾಲ್ಕು ಸಚಿವ ಸಂಪುಟದ ತಂಡಗಳನ್ನು ರಚಿಸಿ ಪ್ರವಾಸ ಕೈಗೊಂಡು ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಪ್ರಯತ್ನ ನಡೆಸಲಾಗಿದೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಸ ಕೈಗೊಂಡು ಬರ ಪರಿಸ್ಥಿತಿಯನ್ನು ನಿರ್ವಹಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆಂದು ಹೇಳಿದರು.
ಬರ ಪರಿಸ್ಥಿತಿಯಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ಸರಬರಾಜಿಗಾಗಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಹೋಲಿಸಿದರೆ ಈ ಜಿಲ್ಲೆಯಲ್ಲಿ ಅಷ್ಟೊಂದು ತೀವ್ರ ಪರಿಸ್ಥಿತಿ ಇಲ್ಲವಾದರೂ ತೀರಾ ತೊಂದರೆಯಿರುವ ಹಳ್ಳಿಗಳಿಗೆ ಟ್ಯಾಂಕರ್ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಚಿವರು ಚಟ್ನಹಳ್ಳಿ, ಎಸ್.ಬಿದರೆ, ಮಲ್ಲಾಪುರ ಮುಂತಾದ ಗ್ರಾಮಗಳಲ್ಲಿ ಒಣಗಿರುವ ಕೆರೆಗಳನ್ನು ವೀಕ್ಷಿಸಿದರು. ಕಡೂರು ಕ್ಷೇತ್ರದ ಶಾಸಕ ವೈ.ಎಸ್.ವಿ. ದತ್ತ, ಎಂಎಲ್‌ಸಿ ಎಂ.ಕೆ.ಪ್ರಾಣೇಶ, ಜಿಪಂ ಸದಸ್ಯ ಮಹೇಶ, ಮಾಜಿ ಎಂಎಲ್‌ಸಿ ಎ.ವಿ.ಗಾಯಿತ್ರಿ ಶಾಂತೇಗೌಡ, ಜಿಲ್ಲಾಧಿಕಾರಿ ಎಸ್.ಪಿ.ಷಡಕ್ಷರಿ ಸ್ವಾಮಿ, ಜಿಪಂ ಸಿಇಒ ಡಾ.ರಾಗಪ್ರಿಯ, ಎಸ್ಪಿ ಸಂತೋಷ್ ಬಾಬು, ಮುಖಂಡರಾದ ಡಾ.ಡಿ.ಎಲ್. ವಿಜಯ ಕುಮಾರ್ ಪಾಲ್ಗೊಂಡಿದ್ದರು.







