ಉಲ್ಬಣಿಸಿದ ಕುಡಿಯುವ ನೀರಿನ ಸಮಸ್ಯೆ ಡ್ಯಾಂನಿಂದ ನೀರೆತ್ತುವುದನ್ನು ನಿಷೇಧಿಸಿ ಡಿಸಿ ಆದೇಶ
ಮಂಗಳೂರು, ಎ.27: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಡ್ಯಾಂನಲ್ಲಿ ಲಭ್ಯವಿರುವ ನೀರನ್ನು ಕೈಗಾರಿಕಾ ಸಂಸ್ಥೆಗಳಿಗೆ ಹಾಗೂ ಸಾರ್ವಜನಿಕರು ಖಾಸಗಿ ಪಂಪ್ ಮೂಲಕ ನೀರೆತ್ತುವುದನ್ನು ಮುಂದಿನ 7 ದಿನಗಳ ಕಾಲ ನಿಷೇಧಿಸಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅವರು ಆದೇಶ ಹೊರಡಿಸಿದ್ದಾರೆ.
ತುಂಬೆ ಡ್ಯಾಂನಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟ ತುಂಬಾ ಇಳಿಕೆಯಾಗಿರುವುದರಿಂದ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕಿನ ಶಂಭೂರಿನಲ್ಲಿರುವ ಎಎಮ್‌ಆರ್ ಪವರ್ ಪ್ರೈ.ಲಿಮಿಟೆಡ್ ಹಾಗೂ ಮಂಗಳೂರು ಸೆಝ್ ಲಿಮಿಟೆಡ್ ಹಾಗೂ ಇತರ ಯಾವುದೇ ಕೈಗಾರಿಕಾ ಸಂಸ್ಥೆಗಳು ಅಥವಾ ಸಾರ್ವಜನಿಕರು ತಮ್ಮ ಖಾಸಗಿ ಪಂಪ್ ಮೂಲಕ ನೀರೆತ್ತುವುದನ್ನು ಮುಂದಿನ 7 ದಿನಗಳ ವರೆಗೆ ನಿಷೇಧಿಸಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಎಎಮ್‌ಆರ್ ಪವರ್ ಪ್ರೈ ಲಿ. ಡ್ಯಾಂನಿಂದ ತುಂಬೆ ಡ್ಯಾಂಗೆ ಒಳ ಹರಿವು ಮೂಲಕ ಬರುವ ನೀರಿನ ಮಾರ್ಗದಲ್ಲಿ ಬಂಟ್ವಾಳ ಪುರಸಭೆ ಹಾಗೂ ಗ್ರಾಮ ಪಂಚಾಯತ್‌ಗಳು ಕುಡಿಯುವ ನೀರಿನ ಉದ್ದೇಶಕ್ಕೆ ನೀರೆತ್ತುವುದನ್ನು ಹೊರತುಪಡಿಸಿ ಬೇರೆ ಯಾರೂ ನೀರನ್ನು ತೆಗೆಯದಂತೆ ಆದೇಶಿಸಲಾಗಿದೆ. ಪ್ರಸ್ತುತ ಆದೇಶವು 7 ದಿನಗಳ ನಂತರ ನದಿಯ ನೀರಿನ ಲಭ್ಯತೆಯ ಆಧಾರದಲ್ಲಿ ಪುನರ್ ಪರಿಶೀಲಿಸಲಾಗುವುದು. ಅಲ್ಲದೆ ಸದ್ರಿ ಆದೇಶವನ್ನು ಸಮಪರ್ಕವಾಗಿ ಜಾರಿಗೊಳಿಸಲು ಪಾಲಿಕೆಯ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಅಗತ್ಯ ಬಿದ್ದಲ್ಲಿ ಸೂಕ್ತ ಪೊಲೀಸ್ ಭದ್ರತೆಯನ್ನು ಪಡೆದುಕೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.







