ಕೆಕೆಆರ್‌ಗೆ ಇಂದು ಮುಂಬೈ ಇಂಡಿಯನ್ಸ್ ಸವಾಲು
ಮುಂಬೈ, ಎ.27: ಈ ವರ್ಷದ ಐಪಿಎಲ್‌ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ ಗುರುವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಕಳೆದ ನಾಲ್ಕು ಆವೃತ್ತಿಯ ಐಪಿಎಲ್‌ನಲ್ಲಿ ಕೆಕೆಆರ್ ಹಾಗೂ ಮುಂಬೈ ತಲಾ ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿದ್ದವು. ಕೆಕೆಆರ್ ಐದು ಪಂದ್ಯಗಳಲ್ಲಿ ಸತತ ನಾಲ್ಕರಲ್ಲಿ ಜಯ ಸಾಧಿಸಿದೆ. ಎ.13 ರಂದು ಕೋಲ್ಕತಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಮುಂಬೈ ವಿರುದ್ಧವೇ ಕೆಕೆಆರ್ ಸೋತಿತ್ತು.ಆ ಪಂದ್ಯದಲ್ಲಿ ಮುಂಬೈನ ನಾಯಕ ರೋಹಿತ್ ಶರ್ಮ 54 ಎಸೆತಗಳಲ್ಲಿ ಔಟಾಗದೆ 84 ರನ್ ಗಳಿಸಿದ್ದರು. ಈ ಬಾರಿಯ ಐಪಿಎಲ್‌ನಲ್ಲಿ ಗೌತಮ್ ಗಂಭೀರ್ ಕೆಕೆಆರ್‌ನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದು, 5 ಪಂದ್ಯಗಳಲ್ಲಿ 237 ರನ್ ಗಳಿಸಿದ್ದಾರೆ.
ಪುಣೆ ವಿರುದ್ಧದ ಪಂದ್ಯದಲ್ಲಿ ಗಂಭೀರ್ ಅಲ್ಪ ಮೊತ್ತಕ್ಕೆ ಔಟಾಗಿದ್ದರು. ಆಗ ಅರ್ಧಶತಕ ಸಿಡಿಸಿದ್ದ ಸೂರ್ಯಕುಮಾರ್ ಯಾದವ್(49 ಎಸೆತ, 60 ರನ್) ಕೆಕೆಆರ್‌ಗೆ ಗೆಲುವು ತಂದುಕೊಟ್ಟಿದ್ದರು. ಗಂಭೀರ್‌ಗೆ ಆರಂಭಿಕ ಜೊತೆಗಾರ ರಾಬಿನ್ ಉತ್ತಪ್ಪ(134 ರನ್) ಉತ್ತಮ ಸಾಥ್ ನೀಡುತ್ತಿದ್ದಾರೆ.
ಮತ್ತೊಂದೆಡೆ, ಮುಂಬೈ ತಂಡ ಟೂರ್ನಿಯಲ್ಲಿ ಈವರೆಗೆ ಮಿಶ್ರ ಫಲಿತಾಂಶ ದಾಖಲಿಸಿದೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ನಾಯಕ ರೋಹಿತ್ ಕಾಣಿಕೆಯಿಲ್ಲದಿದ್ದರೂ, ಪಾರ್ಥಿವ್ ಪಟೇಲ್(81) ಸಾಹಸದಿಂದ 6 ವಿಕೆಟ್ ನಷ್ಟಕ್ಕೆ 189 ರನ್ ಕಲೆ ಹಾಕಿತ್ತು. 25 ರನ್ ಗಳ ಅಂತರದಿಂದ ಜಯ ಸಾಧಿಸಿತ್ತು.
ಮುಂಬೈ ಬ್ಯಾಟಿಂಗ್‌ನಲ್ಲಿ ರೋಹಿತ್ ಹಾಗೂ ಅಂಬಟಿ ರಾಯುಡು(217ರನ್) ಅವರನ್ನೇ ಹೆಚ್ಚು ನೆಚ್ಚಿಕೊಂಡಿದೆ. ಬೌಲಿಂಗ್ ವಿಭಾಗದಲ್ಲಿ ಮಾಲಿಂಗ ಅನುಪಸ್ಥಿತಿಯಲ್ಲೂ ಮುಂಬೈ ತಂಡದ ಪರ ಮಿಚೆಲ್ ಮೆಕ್ಲಿನಘನ್(11 ವಿಕೆಟ್) ಹಾಗೂ ಜಸ್‌ಪ್ರೀತ್ ಬುಮ್ರಾ(8) ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಸ್ಪಿನ್ನರ್ ಹರ್ಭಜನ್ ಸಿಂಗ್ ಈ ವರೆಗೆ ಕೇವಲ 3 ವಿಕೆಟ್ ಪಡೆದಿದ್ದು, ಕೆಕೆಆರ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ.
ಕೆಕೆಆರ್‌ನ ವೇಗದ ಬೌಲರ್‌ಗಳಾದ ಮಾರ್ನೆ ಮೊರ್ಕೆಲ್ ಹಾಗೂ ಉಮೇಶ್ ಯಾದವ್ ವೇಗಿಗಳ ಸ್ನೇಹಿ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ದಾಂಡಿಗರಿಗೆ ಸವಾಲಾಗುವ ಸಾಧ್ಯತೆಯಿದೆ. ಸ್ಪಿನ್ನರ್ ಸುನೀಲ್ ನರೇನ್ ತಂಡಕ್ಕೆ ವಾಪಸಾಗಿದ್ದರಿಂದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ.
ಮುಂಬೈ ತಂಡ ಕೆಕೆಆರ್ ವಿರುದ್ಧ 17-5 ಗೆಲುವು-ಸೋಲಿನ ದಾಖಲೆ ಹೊಂದಿದೆ. ಕಳೆದ ವರ್ಷದ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ತಂಡ ಕೋಲ್ಕತಾಕ್ಕೆ ಕೊನೆಯ ಬಾರಿ ಸೋತಿತ್ತು.
ಪಂದ್ಯ ಆರಂಭದ ಸಮಯ: ರಾತ್ರಿ 8:00







