ರಿಯೋ ಗೇಮ್ಸ್‌ಗೆ ಪೇಸ್-ಭೂಪತಿಗೆ ವೈಲ್ಡ್‌ಕಾರ್ಡ್ ಇಲ್ಲ: ಎಐಟಿಎ
ಹೊಸದಿಲ್ಲಿ, ಎ.27: ಈ ವರ್ಷದ ಒಲಿಂಪಿಕ್ಸ್‌ಗೆ ಯಾವ ದೇಶವೂ ವೈಲ್ಡ್‌ಕಾರ್ಡ್ ಪ್ರವೇಶ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿರುವ ಅಖಿಲ ಭಾರತ ಟೆನಿಸ್ ಅಸೋಸಿಯೇಶನ್(ಎಐಟಿಎ) 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಜೊತೆಯಾಗಿ ಆಡುವ ಆಕಾಂಕ್ಷೆಯಲ್ಲಿದ್ದ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿಗೆ ಶಾಕ್ ನೀಡಿದೆ.
ಈ ವರ್ಷ ವೈಲ್ಡ್‌ಕಾರ್ಡ್ ಲಭ್ಯವಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತಿದ್ದೇವೆ. ಯಾವ ನ್ಯಾಶನಲ್ ಫೆಡರೇಶನ್‌ಗಳು ಈ ವರ್ಷ ವೈರ್ಲ್ಡ್‌ಕಾರ್ಡ್‌ಗೆ ಅರ್ಜಿ ಸಲ್ಲಿಸಿಲ್ಲ. ಈ ಕುರಿತು ಎ.6 ರಂದು ಎಲ್ಲ ದೇಶಗಳಿಗೆ ಪತ್ರವನ್ನು ಕಳುಹಿಸಿಕೊಡಲಾಗಿದೆ ಎಂದು ಏಷ್ಯನ್ ಟೆನಿಸ್ ಫೆಡರೇಶನ್ ಅಧ್ಯಕ್ಷ ಅನಿಲ್ ಖನ್ನಾ ಹೇಳಿದ್ದಾರೆ.
ಪೇಸ್-ಭೂಪತಿ ಜೋಡಿ ಒಲಿಂಪಿಕ್ಸ್‌ಗೆ ವೈರ್ಲ್ಡ್‌ಕಾರ್ಡ್ ಮೂಲಕ ಪ್ರವೇಶ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿರುವ ಎಐಟಿಎ ದೀರ್ಘಕಾಲದ ಬಳಿಕ ಜೊತೆಯಾಗಿ ಆಡ ಬಯಸಿದ್ದ ಪೇಸ್-ಭೂಪತಿಗೆ ತೀವ್ರ ನಿರಾಸೆ ಮೂಡಿಸಿದೆ.
ಪೇಸ್ ಹಾಗೂ ಭೂಪತಿ 2012 ಲಂಡನ್ ಒಲಿಂಪಿಕ್ಸ್‌ನ ಬಳಿಕ ಜೊತೆಯಾಗಿ ಆಡಿಲ್ಲ. 1996 ಹಾಗೂ 2008ರ ನಡುವೆ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಪೇಸ್ ಹಾಗೂ ಭೂಪತಿ ಪದಕ ಜಯಿಸಲು ವಿಫಲರಾಗಿದ್ದರು. ಜೂನ್‌ನಲ್ಲಿ 43ನೆ ಹರೆಯಕ್ಕೆ ಕಾಲಿಡಲಿರುವ ಪೇಸ್ ಏಳನೆ ಬಾರಿ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡು ವಿಶ್ವ ದಾಖಲೆ ನಿರ್ಮಿಸಲು ಬಯಸಿದ್ದರು.







