ದಕ್ಷಿಣ ಭಾರತದ ಅತಿದೊಡ್ಡ ಸಭಾಂಗಣ ಎ.30ಕ್ಕೆ ಲೋಕಾರ್ಪಣೆ
ಬೆಂಗಳೂರು, ಎ. 27: 1964ರಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ಕೃಷಿ ವಿ.ವಿ. ಈ ವರ್ಷ ಸುವರ್ಣ ಘಟಿಕೋತ್ಸವ ಆಚರಣೆ ಮಾಡುತ್ತಿದೆ. ವಿವಿ ಆವರಣದಲ್ಲಿ ದೇಶದ ಪ್ರಥಮ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಹೆಸರಿನಲ್ಲಿರುವ ಅಂತಾರಾಷ್ಟ್ರೀಯ ಸಮಾವೇಶ ಭವನ ಮೈದಾಳಿದೆ. ಈ ಭವನ ಎ.30ರಂದು ನಡೆಯಲಿರುವ ಘಟಿಕೋತ್ಸವಕ್ಕೂ ಮುನ್ನ ಲೋಕಾರ್ಪಣೆಗೊಳ್ಳಲಿದೆ. ದಿಲ್ಲಿಯಲ್ಲಿರುವ ವಿಜ್ಞಾನ ಭವನದ ಮಾದರಿಯಲ್ಲಿ ನಿರ್ಮಿಸಿರುವ ಈ ಭವನವು ಇಡೀ ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ಸಮಾವೇಶ ಭವನವಾಗಿದೆ. ಕೆಳಭಾಗದಲ್ಲಿ 1,400 ಮತ್ತು ಬಾಲ್ಕನಿಯಲ್ಲಿ 600 ಆಸನ ಸಾಮರ್ಥ್ಯ ಹೊಂದಿರುವ ಈ ಭವನ ಸಂಪೂರ್ಣವಾಗಿ ಹವಾನಿಯಂತ್ರಿತವಾಗಿದೆ. ಈ ಮೂಲಕ ಬೆಂಗಳೂರಿನ ಉತ್ತರ ಭಾಗದಲ್ಲಿ ಸೂಕ್ತ ಸಮಾವೇಶ ಭವನಗಳ ಕೊರತೆ ಇದೆ ಎನ್ನುವ ಕೊರಗನ್ನು ಸ್ವಲ್ಪಮಟ್ಟಿಗೆ ನಿವಾರಣೆ ಮಾಡಲಿದೆ.
2008ರಲ್ಲಿ ಆರಂಭಿಸಿದ ನಿರ್ಮಾಣ ಕಾರ್ಯ: 2008ರಲ್ಲಿ ಆರಂಭವಾದ ಈ ಭವನದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ಎಂಟು ವರ್ಷಗಳು ಕಳೆದಿವೆ. ಒಟ್ಟು 36 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಭವನಕ್ಕೆ ರಾಜ್ಯ ಸರಕಾರ 16 ಕೋಟಿ ರೂ. ಅನುದಾನ ನೀಡಿದೆ. ಉಳಿದ ಹಣವನ್ನೆಲ್ಲ ವಿ.ವಿ.ಯೇ ತನ್ನ ಆಂತರಿಕ ಸಂಪನ್ಮೂಲಗಳಿಂದ ಕ್ರೋಢೀಕರಿಸಿ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಿದೆ.
ವಿವಿಯ ಮುಖ್ಯದ್ವಾರದ ಬಲಭಾಗದಲ್ಲಿ ನಿರ್ಮಾಣವಾಗಿರುವ ಈ ಭವನಕ್ಕಾಗಿ ವಿವಿ ಆವರಣದ ಒಟ್ಟು 10 ಎಕರೆ ಜಾಗವನ್ನು ಬಳಸಿಕೊಳ್ಳಲಾಗಿದೆ. ಸಭಾಂಗಣದ ಮುಖ್ಯ ವೇದಿಕೆಯ ಒಟ್ಟು ವಿಸ್ತೀರ್ಣ ಬರೋಬ್ಬರಿ 60*40 ಚದರ ಅಡಿಯಲ್ಲಿ ರೂಪಿಸಲಾಗಿದೆ ಎಂದು ವಿ.ವಿ.ಯ ಆಸ್ತಿ ಅಧಿಕಾರಿ ಎಂ.ಎನ್ ದೇವರಾಜ್ ತಿಳಿಸಿದರು.





