ಸುತ್ತೋಲೆ ಹಿಂಪಡೆಯಲು ಸರಕಾರಕ್ಕೆ ಪತ್ರ ಬರೆದ ಲೋಕಾಯುಕ್ತ
ಲೋಕಾಯುಕ್ತ ಪ್ರಕರಣಗಳು ಎಸಿಬಿಗೆ ವರ್ಗ
ಬೆಂಗಳೂರು, ಎ.27: ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಎಸಿಬಿಗೆ ವರ್ಗಾಯಿಸುವಂತೆ ಸರಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆಯುವಂತೆ ಸರಕಾರಕ್ಕೆ ಪತ್ರ ಬರೆದಿರುವುದಾಗಿ ಲೋಕಾಯುಕ್ತ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಡಾ.ವಿ.ಎಲ್.ನಂದೀಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ಅವರಿದ್ದ ನ್ಯಾಯಪೀಠದ ಎದುರು ನಡೆಯುತ್ತಿದ್ದಾಗ ಲೋಕಾಯುಕ್ತದಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಎಸಿಬಿಗೆ ವರ್ಗಾಯಿಸಿರುವ ಆದೇಶದ ಸುತ್ತೋಲೆಯನ್ನು ಹಿಂಪಡೆಯಲು ಸರಕಾರಕ್ಕೆ ಪತ್ರ ಬರೆದಿರುವುದಾಗಿ ನ್ಯಾಯಪೀಠಕ್ಕೆ ತಿಳಿಸಿದರು.
ನಗರದ ಖನಿಜ ಭವನದಲ್ಲಿ ಎಸಿಬಿ ಕಚೇರಿ ಸ್ಥಾಪನೆಯಾಗಿದ್ದರೂ ಅಲ್ಲಿ ಅಧಿಕಾರಿಗಳ, ಸಿಬ್ಬಂದಿಗಳ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯಿರುವಾಗ ಅದು ಹೇಗೆ ಲೋಕಾಯುಕ್ತದಲ್ಲಿ ದಾಖಲಾಗಿದ್ದ 700 ಪ್ರಕರಣಗಳನ್ನು ಎಸಿಬಿಗೆ ವರ್ಗಾಯಿಸಲು ಆದೇಶಿಸಿತು ಎಂದು ನ್ಯಾಯಪೀಠವು ಸರಕಾರಿ ಪರ ವಕೀಲರನ್ನು ಪ್ರಶ್ನಿಸಿತು.
ಈ ಪ್ರಶ್ನೆಗೆ ಉತ್ತರಿಸಿದ ವಕೀಲರು ಹೈಕೋರ್ಟ್ ವಿಭಾಗೀಯ ಪೀಠ ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಎಸಿಬಿಗೆ ವರ್ಗಾಯಿಸಬಾರದೆಂದು ಆದೇಶಿಸಿದ್ದರೂ ಸರಕಾರ ಸುಪ್ರೀಂಗೆ ಮೇಲ್ಮನವಿ ಸಲ್ಲಿಸುವ ಹಾಗೂ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಎಸಿಬಿ ಸ್ಥಾಪನೆಯಾದ ಬಳಿಕ ಆ ಎಸಿಬಿಗೆ ಬೇಕಾದಷ್ಟು ಅಧಿಕಾರಿಗಳ ಹಾಗೂ ಸಿಬ್ಬಂದಿಯ ನೇಮಿಸಲಾಗಿದೆಯೇ ಎಂಬುದನ್ನು ತಿಳಿಸಿ ಹಾಗೂ ಹೈಕೋರ್ಟ್ ವಿಭಾಗೀಯ ಪೀಠದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋಗುವುದರ ಬಗ್ಗೆಯೂ ಮಾ.28ರಂದು ನ್ಯಾಯಪೀಠಕ್ಕೆ ತಿಳಿಸಬೇಕೆಂದು ಸರಕಾರಿ ಪರ ವಕೀಲರಿಗೆ ನ್ಯಾಯಪೀಠ ಆದೇಶಿಸಿತು.
ಪೊಲೀಸ್ ಹುದ್ದೆಗಳು ಭರ್ತಿಯಾಗಲಿ: ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗಳ, ಇನ್‌ಸ್ಪೆಕ್ಟರ್‌ಗಳ ಹಾಗೂ ಅಧಿಕಾರಿಗಳ ಕೊರತೆ ಹೆಚ್ಚಾಗಿದ್ದು, ಆದಷ್ಟೂ ಬೇಗ ಈ ಹುದ್ದೆಗಳನ್ನು 2016ರ ಅಂತ್ಯದೊಳಗೆ ಭರ್ತಿಮಾಡಬೇಕೆಂದು ಹೈಕೋರ್ಟ್ ಸರಕಾರಕ್ಕೆ ಸೂಚನೆ ನೀಡಿದೆ.







