ಐಆರ್‌ಎನ್‌ಎಸ್‌ಎಸ್-1ಜಿ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭ
ಚೆನ್ನೈ, ಎ.27: ದೇಶದ 7ನೆಯ ನಾವಿಕ ಉಪಗ್ರಹದ ಉಡಾವಣೆ ಗುರುವಾರಕ್ಕೆ ನಿಗದಿಯಾಗಿದೆ. ಭಾರತೀಯ ರಾಕೆಟೊಂದರ ಮೂಲಕ ಅದನ್ನು ಅಂತರಿಕ್ಷಕ್ಕೇರಿಸಲು 51 ಗಂಟೆ 30 ನಿಮಿಷಗಳ ಕ್ಷಣಗಣನೆ ಸಾಮಾನ್ಯವಾಗಿ ಮುಂದುವರಿಯುತ್ತಿದೆಯೆಂದು ಭಾರತೀಯ ಅಂತರಿಕ್ಷ ಸಂಶೋಧನ ಸಂಘಟನೆ (ಇಸ್ರೊ) ಇಂದು ತಿಳಿಸಿದೆ.
ಭಾರತೀಯ ಪ್ರಾದೇಶಿಕ ನಾವಿಕ ಉಪಗ್ರಹ ವ್ಯವಸ್ಥೆ- ಐಆರ್‌ಎನ್‌ಎಸ್‌ಎಸ್-1ಜಿಯನ್ನು ಹೊತ್ತಿರುವ 44.4ಮೀ. ಉದ್ದ ಹಾಗೂ 320 ಟನ್ ಭಾರ ಧ್ರುವ ಉಪಗ್ರಹ ಉಡಾವಣಾ ವಾಹನ ಗುರುವಾರ ಮಧ್ಯಾಹ್ನ 12:50ರ ವೇಳೆ ನಭಕ್ಕೇರಲಿದೆಯೆಂದು ಅದು ಹೇಳಿದೆ.
ಆಗಸಕ್ಕೆ ನೆಗೆದ ಕೇವಲ 20 ನಿಮಿಷಗಳಲ್ಲಿ ರಾಕೆಟ್, 1,425 ಕಿ.ಗ್ರಾಂ, ಭಾರದ ಐಆರ್‌ಎನ್‌ಎಸ್‌ಎಸ್-1ಜಿ ಉಪಗ್ರಹವನ್ನು 497.8 ಕಿ.ಮೀ. ಎತ್ತರದಲ್ಲಿ ಕಕ್ಷೆಗೆ ಸೇರಿಸಲಿದೆ. ಪಿಎಸ್‌ಎಲ್‌ವಿ 4 ಹಂತಗಳ ಎಂಜಿನ್‌ನ ರಾಕೆಟಾಗಿದ್ದು, ಘನ ಹಾಗೂ ದ್ರವ ಇಂಧನಗಳಿಂದ ಪರ್ಯಾಯವಾಗಿ ಚಲಿಸುತ್ತದೆ.
12 ವರ್ಷಗಳ ಆಯುಷ್ಯವಿರುವಂತೆ ವಿನ್ಯಾಸಿಸಲಾಗಿರುವ ಉಪಗ್ರಹವು ನಾವಿಗೇಶನ್ ಹಾಗೂ ರೇಂಜಿಂಗ್‌ಗಾಗಿ ಎರಡು ಪೇಲೋಡ್‌ಗಳನ್ನು ಒಯ್ಯಲಿದೆ.
ನಾವಿಗೇಶನ್ ಪೇಲೋಡ್, ಬಳಕೆದಾರರಿಗೆ ನಾವಿಕ ಸೇವಾ ಸಂಕೇತಗಳನ್ನು ಕಳುಹಿಸಲಿದೆ. ಅದು ಎಲ್ 5- ಬ್ಯಾಂಡ್ ಹಾಗೂ ಎಸ್-ಬ್ಯಾಂಡ್‌ಗಳಲ್ಲಿ ಕಾರ್ಯಾಚರಿಸುತ್ತದೆ. ಅತ್ಯಂತ ನಿಖರ ರುಬಿಡಿಯಂ ಪರಮಾಣು ಗಡಿಯಾರವು ಈ ಪೇ ಲೋಡ್‌ನ ಭಾಗವಾಗಿರುತ್ತದೆ.
ರೇಂಜಿಂಗ್ ಪೇ ಲೋಡ್‌ನಲ್ಲಿ ಒಂದು ಸಿ-ಬ್ಯಾಂಡ್ ಟ್ರಾನ್ಸ್‌ಪಾಂಡರ್ ಇರುತ್ತದೆ. ಅದು ಉಪಗ್ರಹದ ವ್ಯಾಪ್ತಿಯನ್ನು ನಿಖರವಾಗಿ ನಿರ್ಧರಿಸಲು ನೆರವಾಗಲಿದೆ.





