ಜಿಇಇ(ಮೇನ್ಸ್)ನಲ್ಲಿ ಸೂಪರ್-30ರ ಎಲ್ಲ ವಿದ್ಯಾರ್ಥಿಗಳು ತೇರ್ಗಡೆ
ಪಟ್ನಾ,ಎ.27: ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಾಗಿರುವ ಐಐಟಿಗಳಲ್ಲಿ ಪ್ರವೇಶಾವಕಾಶ ಕಲ್ಪಿಸುವ ಜಂಟಿ ಪ್ರವೇಶ ಪರೀಕ್ಷೆ(ಜೆಇಇ-ಮುಖ್ಯ)ಯ ಪರಿಣಾಮಗಳು ಬುಧವಾರ ಪ್ರಕಟಗೊಂಡಿದ್ದು,ಖ್ಯಾತ ಗಣಿತ ಶಿಕ್ಷಕ ಆನಂದ ಅವರ ಸೂಪರ್ 30ರ ಪ್ರಸಕ್ತ ಬ್ಯಾಚಿನ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.
ಇದರೊಂದಿಗೆ ಈ ವಿದ್ಯಾರ್ಥಿಗಳು ಮೊದಲ ತಡೆಯನ್ನು ದಾಟಿದ್ದಾರೆ. ಮುಂದಿನ ಗುರಿ ಬಹಳ ದೂರವೇನಿಲ್ಲ. ಕಠಿಣ ಪರಿಶ್ರಮ ಮುಂದುವರಿಸಿದರೆ ಈ ವಿದ್ಯಾರ್ಥಿಗಳು ಅದರಲ್ಲೂ ಯಶಸ್ವಿಯಾಗುತ್ತಾರೆ ಎಂದು ಆನಂದರ ಸೋದರ ಪ್ರಣವ್ ಹರ್ಷ ವ್ಯಕ್ತಪಡಿಸಿದರು.
ಪ್ರಣವ ಮಾತಿಗೆ ಧ್ವನಿಗೂಡಿಸಿದ ಕೃಷಿಕಾರ್ಮಿಕನ ಮಗ ಬಸಂತ ಕುಮಾರ,ನಮ್ಮ ಗುರಿ ಐಐಟಿ ಆಗಿದೆ ಮತ್ತು ಜೆಇಇ(ಅಡ್ವಾನ್ಸ್) ಪರೀಕ್ಷೆಯವರೆಗೆ ನಾವು ವಿರಮಿಸುವುದಿಲ್ಲ ಎಂದರು.
ಆನಂದ ಅವರ ಸೂಪರ್-30 ತರಬೇತಿ ಸಂಸ್ಥೆ ಭಾರತದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಕೂಲಿಗಳು,ಕಾರ್ಮಿಕರು ಹೀಗೆ ತೀರ ಬಡಕುಟುಂಬಗಳ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಉಚಿತ ತರಬೇತಿ ನೀಡಿ ಐಐಟಿ ಪ್ರವೇಶ ಪರೀಕ್ಷೆಗೆ ಅವರನ್ನು ಸಿದ್ಧಗೊಳಿಸುವ ಆನಂದ,ತನ್ನ ವಿದ್ಯಾರ್ಥಿಗಳಿಗೆ ವಸತಿ ಮತ್ತು ಊಟವನ್ನೂ ಉಚಿತವಾಗಿಯೇ ಒದಗಿಸುತ್ತಾರೆ. ಪ್ರತಿವರ್ಷ ತರಬೇತಿಗೆ ಕೇವಲ 30 ವಿದ್ಯಾರ್ಥಿಗಳನ್ನು ಮಾತ್ರ ಅವರು ತೆಗೆದುಕೊಳ್ಳುತ್ತಿದ್ದು, ಸಾಮಾನ್ಯವಾಗಿ ಈ ಎಲ್ಲ ವಿದ್ಯಾರ್ಥಿಗಳು ಐಐಟಿಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ.







