ಮಾಲೆಗಾಂವ್ ಸ್ಫೋಟ: ಅಪರಾಧಿಗಳಿಗೆ ಶಿಕ್ಷೆ ಎಂದು?

ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಎಂಟು ಮಂದಿ ಆರೋಪಿಗಳು ಕೊನೆಗೂ ಬಿಡುಗಡೆಗೊಂಡಿದ್ದಾರೆ. ಇನ್ನೋರ್ವ ಆರೋಪಿ, ಮೃತಪಟ್ಟಿರುವುದರಿಂದ, ಆತನ ಬಿಡುಗಡೆಗೆ ಯಾವ ಅರ್ಥವೂ ಉಳಿದಿಲ್ಲ. ತಾನು ಸಾಯುವಾಗ ‘ಶಂಕಿತ ಉಗ್ರ’ ಎಂಬ ಆರೋಪದೊಂದಿಗೇ ಆತ ಮೃತನಾದ. ಇದೀಗ ಎಂಟು ಆರೋಪಿಗಳು ದೋಷಮುಕ್ತರಾಗಿದ್ದಾರೆ ಎಂದು ನ್ಯಾಯಾಲಯವೇನೋ ಘೋಷಿಸಿದೆ. ಆದರೆ ಈವರೆಗೆ ಅವರು ಅನುಭವಿಸಿದ ಶಿಕ್ಷೆ ಯಾವ ಕಾರಣಕ್ಕಾಗಿ? ಎನ್ನುವುದನ್ನು ವಿವರಿಸಲು ನ್ಯಾಯಾಲಯ ವಿಫಲವಾಗಿದೆ. ಅನ್ಯಾಯವಾಗಿ ಅವರು ಅನುಭವಿಸಿದ ಶಿಕ್ಷೆಗೆ, ಅವಮಾನಕ್ಕೆ, ಕಳಂಕಕ್ಕೆ ಪ್ರತಿಯಾಗಿ ನ್ಯಾಯಾಲಯ ಅವರಿಗೆ ಏನನ್ನು ನೀಡುತ್ತದೆ? ತಪ್ಪು ಗುರುತಿಗಾಗಿ ಪೊಲೀಸರು ಅವರೊಂದಿಗೆ ಕ್ಷಮೆಯಾಚಿಸಿದರೇ? ಎನ್ನುವುದರ ವಿವರಗಳನ್ನೆಲ್ಲ ಬಹಿರಂಗ ಪಡಿಸಲು ಮಾಧ್ಯಮಗಳಿಗೆ ಯಾವ ಆಸಕ್ತಿಯೂ ಇಲ್ಲ. ಇದೇ ಸಂದರ್ಭದಲ್ಲಿ ಅವರು ನಿರಪರಾಧಿಗಳಾಗಿ ಬಿಡುಗಡೆಯಾಗಿರುವುದು ನ್ಯಾಯಾಲಯದ ದೃಷ್ಟಿಯಿಂದ ಮಾತ್ರ. ಸಮಾಜ ಅವರನ್ನು ನಿರಪರಾಧಿಗಳೆಂದು ಗುರುತಿಸುವಷ್ಟು ದೊಡ್ಡ ಹೃದಯವನ್ನು ಹೊಂದಿದೆಯೇ? ಅವರ ಕುರಿತಂತೆ ಮಾಧ್ಯಮಗಳು ನೀಡಿದ ಪೂರ್ವಾಗ್ರಹ ಪೀಡಿತ ತೀರ್ಪಿನಿಂದ ಅವರಿಗೆ ಬಿಡುಗಡೆ ಯಾವಾಗ? ಈ ಪ್ರಶ್ನೆಗಳಿಗೆ ಉತ್ತರ ದೊರಕುವುದು ಕಷ್ಟ.
ಯಾವುದೇ ಸ್ಫೋಟ ನಡೆದಾಕ್ಷಣ, ಕೆಲವೇ ನಿಮಿಷಗಳಲ್ಲಿ ಮಾಧ್ಯಮಗಳು ಆರೋಪಿಗಳನ್ನು ಘೋಷಿಸಿ ಬಿಡುತ್ತವೆ. ಲಷ್ಕರೆ ತಯ್ಯಿಬಾ, ಇಂಡಿಯನ್ ಮುಜಾಹಿದೀನ್ ಹೀಗೆ ಚಿತ್ರ ವಿಚಿತ್ರ ಸಂಘಟನೆಗಳ ಹೆಸರುಗಳನ್ನು ಮಾಧ್ಯಮಗಳು ಘೋಷಿಸುತ್ತವೆ. ಒಂದು ಸಣ್ಣ ಕೊಲೆ ನಡೆದರೆ ಅದರ ಆರೋಪಿಗಳನ್ನು ಗುರುತಿಸಲು ಪೊಲೀಸರು ಹಲವು ವರ್ಷಗಳು ತಡಕಾಡುತ್ತಾರೆ. ಇದೇ ಸಂದರ್ಭದಲ್ಲಿ ಬಾಂಬ್ ಸ್ಫೋಟ ನಡೆದಾಕ್ಷಣ ಪೊಲೀಸರು ಆರೋಪಿಗಳ ಹೆಸರನ್ನು ಘೋಷಿಸಿ ಬಿಡುತ್ತಾರೆ.ಮೊದಲು ಮಾಧ್ಯಮಗಳು ಸಂಘಟನೆಗಳ ಹೆಸರುಗಳನ್ನು ಘೋಷಿಸಿದರೆ, ಪೊಲೀಸರು ಕೆಲವು ಮುಸ್ಲಿಮ್ ಹೆಸರುಗಳನ್ನು ಘೋಷಿಸುತ್ತಾರೆ. ಅಲ್ಲಿಗೆ ಆ ಸ್ಫೋಟದ ತನಿಖೆ ಮುಗಿದು ಹೋಗುತ್ತದೆ. ಮುಂದೆ ಪೊಲೀಸರಿಗೆ ತನಿಖೆಯ ಕೆಲಸವಿರುವುದಿಲ್ಲ. ಬಂಧಿಸಿದ ಅಮಾಯಕರ ಮೇಲಿನ ಆರೋಪ ಗಳನ್ನು ನ್ಯಾಯಾಲಯದಲ್ಲಿ ಸಾಬೀತು ಮಾಡುವ ಕೆಲಸ ಮಾತ್ರ. ಆ ಕೆಲಸ ಮುಗಿಯುವಾಗ ಎಷ್ಟೋ ವರ್ಷಗಳು ಕಳೆದು ಹೋಗಬಹುದು. ಅಷ್ಟರಲ್ಲಿ ಆ ಸ್ಫೋಟ ಪ್ರಕರಣವನ್ನೇ ಜನರು ಮರೆತಿ ರುತ್ತಾರೆ. ಮಾಲೆಗಾಂವ್ ಸ್ಫೋಟದಲ್ಲಿ ಬಂಧಿಸಲ್ಪಟ್ಟು, ಹಲವು ವರ್ಷಗಳ ಕಾಲ ನರಕ ಸದೃಶವಾದ ಬದುಕನ್ನು ಕಳೆದ ಆರೋಪಿಗಳ ಕತೆಯೂ ಇದೇ ಆಗಿದೆ. ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ ತನಿಖಾಧಿಕಾರಿಗಳ ಬಳಿಯಿದ್ದ ಪ್ರಮುಖ ಸಾಕ್ಷಿಯೆಂದರೆ ಆರೋಪಿಗಳ ಹೆಸರು. ಅವರು ಮುಸ್ಲಿಮ ಾಗಿದ್ದರು ಎನ್ನುವುದೇ ಸ್ಫೋಟಕ್ಕೂ ಅವರಿಗೂ ಸಂಬಂಧವಿರಬಹುದು ಎನ್ನುವ ಸಂದೇಹಕ್ಕೆ ಮುಖ್ಯ ಕಾರಣವಾಗಿತ್ತು. ಉಳಿದಂತೆ ಪೊಲೀಸರ ಕೃತಕ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಲಿಲ್ಲ. ಇದೇ ಸಂದರ್ಭದಲ್ಲಿ ಮಾಲೆಗಾಂವ್ ಸ್ಫೋಟದ ನಿಜವಾದ ಆರೋಪಿಗಳು ಪತ್ತೆಯಾಗಿರುವುದು ಇಡೀ ಪ್ರಕರಣಕ್ಕೆ ತಿರುವು ನೀಡಿತು. ಹೇಮಂತ ಕರ್ಕರೆ ತಂಡ ಬಹಿರಂಗಪಡಿಸಿದ ಸತ್ಯ, ಹಲವು ಅಮಾಯಕ ಮುಸ್ಲಿಮರು ಜೈಲು ಪಾಲಾಗುವುದನ್ನು ತಪ್ಪಿಸಿತು. ಮಾಲೆಗಾಂವ್ ಸ್ಫೋಟದಲ್ಲಿ ಕೇಸರಿ ಉಗ್ರರ ಕೈವಾಡವಿರುವುದು ಪತ್ತೆಯಾಗಿ ವರ್ಷಗಳೇ ಆಗಿದ್ದರೂ ಈ ಅಮಾಯಕರು ಜೈಲಲ್ಲೇ ಕಾಲ ಕಳೆಯಬೇಕಾಗಿ ಬಂದುದು ನ್ಯಾಯದ ವ್ಯಂಗ್ಯವೇ ಸರಿ. ಇಷ್ಟಕ್ಕೂ ಪೊಲೀಸರೇನೋ ಬಂಧಿಸಿದರು. ನ್ಯಾಯಾಲಯ ನಿರಪರಾಧಿಗಳು ಎಂದು ಘೋಷಿಸಿತು. ಆದರೆ ಬಿಡುಗಡೆಗೊಂಡ ಆರೋಪಿಗಳನ್ನು ಸಮಾಜ ಒಪ್ಪುವುದು ಸುಲಭವಿಲ್ಲ. ಬಿಡುಗಡೆಗೊಂಡವರಿಗೆ ಯಾವುದಾದರೂ ಒಂದು ಸಂಸ್ಥೆ ವಿಶ್ವಾಸದಿಂದ ಕೆಲಸ ನೀಡುವುದು ಅಸಾಧ್ಯ. ಅಷ್ಟೇ ಅಲ್ಲ, ಸಮಾಜ ಅವರನ್ನು ಮುಂದೆಯೂ ಸಂಶಯದಿಂದಲೇ ನೋಡುತ್ತದೆ. ಅವರ ಹಣೆಯ ಮೇಲೆ ಪೊಲೀಸರು ಅಚ್ಚೊತ್ತಿದ ಉಗ್ರರೆಂಬ ಅಚ್ಚೆಯನ್ನು ಅಳಿಸಿ ಹಾಕು ವುದು ಅಷ್ಟು ಸುಲಭವಿಲ್ಲ. ತಮ್ಮದೇ ಕಾನೂನು ಮಾಡದ ಅಪರಾಧಕ್ಕಾಗಿ ಹಲವು ವರ್ಷಗಳ ಕಾಲ ಜೈಲಿಗೆ ತಳ್ಳಿತು ಎನ್ನುವುದು ಅಮಾಯಕರ ಮನದಲ್ಲಿ ಈ ದೇಶದ ನ್ಯಾಯ. ಕಾನೂನು ವ್ಯವಸ್ಥೆಯ ಬಗ್ಗೆ ಎಂತಹ ಅಭಿಪ್ರಾಯ ಬಿತ್ತೀತು? ಅಮಾಯ ಕರನ್ನು ಬಂಧಿಸುವ ಮೂಲಕ ಪೊಲೀಸರು ಈ ದೇಶದಲ್ಲಿ ಉಗ್ರರನ್ನು ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆಯೇ ಹೊರತು, ಉಗ್ರರನ್ನು ದಮನಿಸುವ ಕೆಲಸವಲ್ಲ. ಒಂದೆಡೆ ಅಮಾಯಕರು ಉಗ್ರರಾಗಿ ಜೈಲಿಗೆ ಸೇರುವುದು, ನಿಜವಾದ ಉಗ್ರರಿಗೆ ಇನ್ನಷ್ಟು ಕೃತ್ಯಗಳನ್ನು ಎಸಗಲು ಸ್ಫೂರ್ತಿಯಾಗುತ್ತದೆ. ‘ಕಾನೂನು ಕತ್ತೆ’ ಎನ್ನುವ ಭ್ರಮೆ ಅವರಲ್ಲಿ ಬಂದು ಬಿಡುತ್ತದೆ. ದುಷ್ಕೃತ್ಯಗಳನ್ನು ಎಸಗಿ ಪಾರಾಗಬಹುದು ಎನ್ನುವ ಭರವಸೆ ಅವರಿಗೆ ಸಿಕ್ಕಿದರೆ, ಉಗ್ರವಾದಕ್ಕೆ ಪರೋಕ್ಷ ಕುಮ್ಮಕ್ಕು ನೀಡಿದಂತೆಯೇ ಸರಿ. ಮಾಲೆಗಾಂವ್, ಮಕ್ಕಾ, ಅಜ್ಮೀರ್, ಸಂಜೋತಾ ಸ್ಫೋಟಗಳಲ್ಲಿ ನಡೆದದ್ದು ಇದೇ ಆಗಿದೆ. ಸ್ಫೋಟ ನಡೆಸಿದವರು ಒಬ್ಬರಾದರೆ, ಜೈಲು ಸೇರಿರುವುದು ಇನ್ನೊಬ್ಬರು. ಇದು ದೇಶದಲ್ಲಿ ಕೇಸರಿ ಉಗ್ರವಾದ ವ್ಯಾಪಕವಾಗಿ ಹರಡಲು ಪ್ರೋತ್ಸಾಹ ನೀಡಿತು. ಇದೀಗ ಮಾಲೆಗಾಂವ್ ಸ್ಫೋಟದಲ್ಲಿ ಅಮಾಯಕರು ಬಿಡುಗಡೆಯಾಗಿರುವುದರಿಂದ ಸ್ಫೋಟ ಸಂತ್ರಸ್ತರಿಗೆ ನ್ಯಾಯ ನೀಡಿದಂತಾಗುವುದಿಲ್ಲ. ಜೊತೆಗೆ ನಿಜವಾದ ಅಪರಾಧಿ ಗಳು ಗಲ್ಲಿಗೇರುವಂತಾಗಬೇಕು. ಆದರೆ ಸದ್ಯಕ್ಕೆ ಮಾಲೆಗಾಂವ್ ಸಹಿತ, ಕೇಸರಿ ಉಗ್ರರ ಕೈವಾಡವಿರುವ ಪ್ರಕರಣಗಳು ದುರ್ಬಲಗೊಳ್ಳುತ್ತಿವೆ ಎಂಬ ವ್ಯಾಪಕ ಆರೋಪ ಕೇಳಿ ಬರುತ್ತಿದೆ. ಸರಕಾರವನ್ನೇ ಬಳಸಿಕೊಂಡು ಸಾಕ್ಷವನ್ನು ನಾಶ ಪಡಿಸುವ ಪ್ರಯತ್ನ ನಡೆಯುತ್ತಿರುವಾಗ, ಆರೋಪಿಗಳಿಗೆ ಶಿಕ್ಷೆಯಾದೀತು ಎಂದು ನಿರೀಕ್ಷಿಸುವುದಾದರೂ ಹೇಗೆ? ಅಪರಾಧಿಗಳಿಗೆ ಶಿಕ್ಷೆಯಾಗದೇ ಇದ್ದರೆ, ಈ ದೇಶದಲ್ಲಿ ಉಗ್ರವಾದ ನಾಶವಾಗುವುದು ಹೇಗೆ? ಅಫ್ಝಲ್‌ಗುರುವಿಗೆ ಒಂದು ನೀತಿ, ಕರ್ನಲ್ ಪುರೋಹಿತ್, ಪ್ರಜ್ಞಾಸಿಂಗ್‌ರಂತಹ ಉಗ್ರರಿಗೆ ಇನ್ನೊಂದು ನೀತಿಯನ್ನು ತಾಳಿದರೆ, ಅದು ದೇಶವನ್ನು ವಿಚ್ಛಿದ್ರಗೊಳಿಸೀತೆ ಹೊರತು, ದೇಶಕ್ಕೆ ಒಳ್ಳೆಯದನ್ನು ಮಾಡಲಾರದು. ಆದುದರಿಂದ, ಕೇಂದ್ರ ಸರಕಾರ ಉಗ್ರವಾದದ ಕುರಿತಂತೆ ಹೊಂದಿರುವ ದ್ವಂದ್ವ ನಿಲುವನ್ನು ನಿವಾರಿಸಿ, ದೇಶದ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಸರಿ ಉಗ್ರರ ವಿರುದ್ಧ ಕಾನೂನನ್ನು ಬಳಸಬೇಕಾಗಿದೆ.







