ವಿಶಾಖಪಟ್ಟಣ ಬಯೋ ಡೀಸೆಲ್ ಸ್ಥಾವರದಲ್ಲಿ ಮುಂದುವರಿದ ಬೆಂಕಿ
ವಿಶಾಖಪಟ್ಟಣ, ಎ.27: ವಿಶಾಖ ಪಟ್ಟಣ ವಿಶೇಷ ಆರ್ಥಿಕ ವಲಯದ (ವಿ-ಸೆಝ್) ಜೈವಿಕ ಡೀಸೆಲ್ ಉತ್ಪಾದನಾ ಘಟಕವೊಂದರಲ್ಲಿ ಮಂಗಳವಾರ ಸಂಜೆ ಕಾಣಿಸಿಕೊಂಡ ಭಾರೀ ಬೆಂಕಿ, ನಿಯಂತ್ರಣದ ತೀವ್ರ ಪ್ರಯತ್ನದ ಹೊರತಾಗಿಯೂ ಇಂದು ವಿನಾಶವನ್ನು ಮುಂದುವರಿಸಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಲಸೇವೆ, ವಿಶಾಖಪಟ್ಟಣ ಉಕ್ಕು ಕಾರ್ಖಾನೆ ಹಾಗೂ ಬಂದರು ಮಂಡಳಿಗಳ 40 ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಿಯಂತ್ರಿಸಲು ಹೋರಾಡುತ್ತಿವೆ. ದುವ್ವಡದ ಬಯೋಕ್ಸ್‌ಮ್ಯಾಕ್ಸ್ ಫುಯೆಲ್ಸ್ ಲಿ. ಕಂಪೆನಿಯ ಆವರಣದಲ್ಲಿ ಮಂಗಳವಾರ ಸಂಜೆ 7:30ರ ವೇಳೆ ಬೆಂಕಿ ಕಾಣಿಸಿಕೊಂಡಿತೆಂದು ಘಟನಾ ಸ್ಥಳದಲ್ಲಿದ್ದ ವಿಶಾಖಪಟ್ಟಣ ಜಿಲ್ಲಾ ಕಲೆಕ್ಟರ್ ಎನ್.ಯುವರಾಜ್ ವಿವರಿಸಿದ್ದಾರೆ.
ಯಾರೂ ಹತ್ತಿರದಲ್ಲಿಲ್ಲದ, ದಾಸ್ತಾನು ಪ್ರದೇಶದಲ್ಲಿ ಅಗ್ನಿ ಅನಾಹುತ ಸಂಭವಸಿರುವುದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲವೆಂದು ಅವರು ಹೇಳಿದ್ದಾರೆ.
18 ದಾಸ್ತಾನು ಟ್ಯಾಂಕ್‌ಗಳ ಪೈಕಿ 12 ಟ್ಯಾಂಕ್‌ಗಳಿಗೆ ಬೆಂಕಿ ಹಿಡಿದಿದೆ. ತೈಲ ಸಂಪೂರ್ಣ ಮುಗಿಯುವವರೆಗೆ ಅವು ಉರಿಯುತ್ತಲೇ ಇರುತ್ತವೆಂದು ಯುವರಾಜ್ ತಿಳಿಸಿದ್ದಾರೆ.
ಬುಧವಾರ ಸಂಜೆಯ ವೇಳೆಗೆ ಬೆಂಕಿ ನಿಯಂತ್ರಣಕ್ಕೆ ಬರುವ ನಿರೀಕ್ಷೆಯಿದೆ. ಉಳಿದ 6 ಟ್ಯಾಂಕ್‌ಗಳಿಗೆ ಬೆಂಕಿ ಹರಡದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಬೆಂಕಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.





