ಗುರಿ ಸಾಧನೆಯಲ್ಲಿ ಶೇ.76ರಷ್ಟು ಹಿಂದುಳಿದ ಸ್ವಚ್ಛ ಭಾರತ ನಗರ ಶೌಚಾಲಯ ಯೋಜನೆ

ಹೊಸದಿಲ್ಲಿ, ಎ.27: ಸ್ವಚ್ಛ ಭಾರತ ಯೋಜನೆಯಡಿ ನಗರ ಪ್ರದೇಶಗಳಲ್ಲಿ 2016,ಮಾರ್ಚ್‌ನೊಳಗೆ 25 ಲಕ್ಷ ಶೌಚಗೃಹ ನಿರ್ಮಾಣದ ಗುರಿಯನ್ನು ಹೊಂದಲಾಗಿತ್ತಾದರೂ ನಿರ್ಮಾಣಗೊಂಡಿರುವುದು ಆರು ಲಕ್ಷ(ಶೇ.24) ಮಾತ್ರ!
ಇದೇ ಅವಧಿಯಲ್ಲಿ ನಗರ ಪ್ರದೇಶಗಳಲ್ಲಿ ಒಂದು ಲಕ್ಷ ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯಗಳ ಗುರಿಯಲ್ಲಿ ಶೇ.28ರಷ್ಟು(28,948) ಮಾತ್ರ ಸಾಧಿಸಲು ಸಾಧ್ಯವಾಗಿದೆ.
ಗುಜರಾತ್ 2015,ಡಿಸೆಂಬರ್‌ವರೆಗೆ 3,27,880 ವ್ಯಕ್ತಿಗತ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ರಾಜ್ಯಗಳ ಪೈಕಿ ಮೊದಲ ಸ್ಥಾನದಲ್ಲಿದೆ.
ಸ್ವಚ್ಛ ಭಾರತ ಅಭಿಯಾನದ ಇನ್ನೊಂದು ಭಾಗವಾಗಿರುವ ನಗರ ತ್ಯಾಜ್ಯ ಸಂಸ್ಕರಣೆ ಯೋಜನೆಯೂ ತನ್ನ ಗುರಿಸಾಧನೆಯಲ್ಲಿ ವಿಫಲಗೊಳ್ಳುತ್ತಿದೆ.2015,ಸೆಪ್ಟೆಂಬರ್‌ನಲ್ಲಿ ಆರಂಭಗೊಂಡಿದ್ದ ಶೌಚಗೃಹ ಯೋಜನೆಯು ಸರಿದಾರಿಗೆ ಬಂದರೂ ಕೂಡ ಭಾರತೀಯ ನಗರಗಳು ಮತ್ತು ಪಟ್ಟಣಗಳಿಗೆ 37.70 ಕೋಟಿ ಜನರಿಂದ ಸೃಷ್ಟಿಯಾಗುವ ತ್ಯಾಜ್ಯದ ಮೂರನೇ ಒಂದಕ್ಕಿಂತ ಹೆಚ್ಚು ತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯವಿಲ್ಲ ಎಂದು ಇಂಡಿಯಾ ಸ್ಪೆಂಡ್ ಈ ವರ್ಷದ ಜನವರಿಯಲ್ಲಿ ವರದಿ ಮಾಡಿತ್ತು. ಉಳಿದ ತ್ಯಾಜ್ಯವನ್ನು ನದಿ,ಸಮುದ್ರ, ಸರೋವರ ಮತ್ತು ಕೆರೆಗಳಲ್ಲಿ ಬೇಕಾಬಿಟ್ಟಿಯಾಗಿ ಸುರಿಯಲಾಗುತ್ತಿದ್ದು, ಇದು ಭಾರತದ ಶೇ.75ರಷ್ಟು ಜಲಮೂಲಗಳ ಮಾಲಿನ್ಯಕ್ಕೆ ಕಾರಣವಾಗಿದೆ.
ನಗರ ಪ್ರದೇಶಗಳಲ್ಲಿ 8.5 ಕೋ.ಜನರಿಗೆ ಸೂಕ್ತ ನೈರ್ಮಲ್ಯ ವ್ಯವಸ್ಥೆಗಳಿಲ್ಲ. ಇದು ಜರ್ಮನಿಯ ಜನಸಂಖ್ಯೆಗಿಂತ ಹೆಚ್ಚು.
ಸರಕಾರವು ಹೇಳುವಂತೆ ನಗರ ಪ್ರದೇಶಗಳಲ್ಲಿ 19 ಲಕ್ಷ ಶೌಚಗೃಹಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ,ಆದರೆ ಕಾಮಗಾರಿಯ ಪ್ರಗತಿ ಮಾತ್ರ ತುಂಬ ನಿಧಾನವಾಗಿದೆ.
ಐದು ರಾಜ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಶೌಚಗೃಹಗಳನ್ನು ನಿರ್ಮಿಸುತ್ತಿವೆ ಮತ್ತು ಈ ಪೈಕಿ ಆಂಧ್ರಪ್ರದೇಶವನ್ನು ಹೊರತುಪಡಿಸಿದರೆ ಉಳಿದ ನಾಲ್ಕು ಬಿಜೆಪಿ ಆಡಳಿತದ ರಾಜ್ಯಗಳಾಗಿವೆ.
ಗ್ರಾಮೀಣ ಪ್ರದೇಶಗಳ ಜನರಿಗಿಂತ (ಶೇ.43) ಹೆಚ್ಚು ನಗರ ಪ್ರದೇಶಗಳ ಜನರು(ಶೇ.81) ಶೌಚಾಲಯಗಳನ್ನು ಬಳಸುತ್ತಿದ್ದಾರೆ ಎಂದು ಲೋಕಸಭೆಯಲ್ಲಿ ನೀಡಲಾದ ಉತ್ತರವೊಂದು ತಿಳಿಸಿದೆ.
ಸಮುದಾಯ ಶೌಚಗೃಹಗಳ ನಿರ್ಮಾಣದಲ್ಲಿ ದಿಲ್ಲಿ ಮೊದಲ ಸ್ಥಾನದಲ್ಲಿದೆ. ಅಲ್ಲಿ ಸರಕಾರವು ಕೊಳಗೇರಿಗಳಲ್ಲಿ ಇವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸುತ್ತಿದೆ.
ಒಳಚರಂಡಿ ವ್ಯವಸ್ಥೆಯೂ ಶೌಚಗೃಹ ನಿರ್ಮಾಣದಷ್ಟೇ ಮಹತ್ವದ್ದಾಗಿದೆ. ಭಾರತದಲ್ಲಿ 522 ಕಾರ್ಯನಿರತ ಒಳಚರಂಡಿ ತ್ಯಾಜ್ಯ ಸಂಸ್ಕರಣೆ ಘಟಕಗಳಿದ್ದು, ಈ ಪೈಕಿ ಅತಿ ಹೆಚ್ಚಿನ(62) ಘಟಕಗಳು ಮಹಾರಾಷ್ಟ್ರದಲ್ಲಿವೆ.
2015,ನವೆಂಬರ್‌ನಲ್ಲಿ ಹೇರಲಾಗಿರುವ ಸ್ವಚ್ಛ ಭಾರತ ಸೆಸ್‌ನಿಂದ ರಾಷ್ಟ್ರವ್ಯಾಪಿ ಶೌಚಾಲಯಗಳ ನಿರ್ಮಾಣಕ್ಕೆ ಹೆಚ್ಚಿನ ವೇಗ ದೊರಕಿದೆ ಎಂದು ಸ್ಪೆಂಡ್ ಇಂಡಿಯಾ ಈ ವಾರ ವರದಿ ಮಾಡಿತ್ತು.







