ಕುದುರೆಯೇರಿ ಬಂದ ಸಂಸದ!
ಸಮ-ಬೆಸ ವಿರೋಧ
ಹೊಸದಿಲ್ಲಿ, ಎ.27: ಸಚಿವರು ಹಾಗೂ ಸರಕಾರಿ ಅಧಿಕಾರಿಗಳಿಗೂ ವಿನಾಯಿತಿ ನೀಡದ ದಿಲ್ಲಿಯ ಆಮ್ ಆದ್ಮಿ ಪಕ್ಷ ಸರಕಾರದ ಸಮ-ಬೆಸ ಕಾರ್ಯಕ್ರಮವನ್ನು ಕೆಲವು ಸಂಸತ್ ಸದಸ್ಯರು ಕಳೆದ ಮೂರು ದಿನಗಳಿಂದ ಶತಾಯು ಗತಾಯ ವಿರೋಧಿಸುತ್ತಿದ್ದಾರೆ.
ಸೋಮವಾರ ಈ ವಿಚಾರ ಲೋಕಸಭೆಯಲ್ಲಿ ಚರ್ಚೆಗೆ ಬಂದಿದ್ದು, ವಿನಾಯಿತಿ ಇಲ್ಲದಿರುವುದು, ‘ಅಪಮಾನ’ ಎಂದು ಕೆಲವು ಸದಸ್ಯರು ಆರೋಪಿಸಿದ್ದರು.
ಸಂಸದರಿಗೆ ವಿನಾಯಿತಿ ನೀಡುವ ಸಾಧ್ಯತೆಯಲ್ಲಿ ದಿಲ್ಲಿಯ ಸಾರಿಗೆ ಸಚಿವ ಗೋಪಾಲ್ ರಾಯ್ ತಳ್ಳಿ ಹಾಕಿರುವ ಹೊರತಾಗಿಯೂ, ಮಂಗಳವಾರ ಅನೇಕ ಸಂಸದರು ಸಮ ನೋಂದಣಿ ಸಂಖ್ಯೆಯ ಕಾರೊಂದರಲ್ಲಿ ಸಂಸತ್ ಭವನಕ್ಕೆ ಆಗಮಿಸಿದ್ದರು. (ಮಂಗಳವಾರ ಬೆಸ ನೋಂದಣಿ ಸಂಖ್ಯೆಯ ವಾಹನಗಳ ದಿನವಾಗಿತ್ತು). ಬುಧವಾರ ಬಿಜೆಪಿ ಸಂಸದ ರಾಮ್‌ಪ್ರಸಾದ್ ಶರ್ಮ ಕುದುರೆಯ ಮೇಲೆ ಸಂಸತ್ತಿಗೆ ಬರುವುದರೊಂದಿಗೆ ಪ್ರತಿಭಟನೆ ವಿಚಿತ್ರ ತಿರುವು ಪಡೆಯಿತು. ಆ ಕುದುರೆಗೆ ‘ಮಾಲಿನ್ಯ ಮುಕ್ತ ವಾಹನ’ ಎಂಬ ಫಲಕ ಹಾಕಲಾಗಿತ್ತು.
ಇನ್ನೊಬ್ಬರು ಬಿಜೆಪಿ ಸಂಸದ ವಿಜಯ್ ಗೋಯಲ್ ಸಂಸತ್ತಿಗೆ ಬಂದಿದ್ದ ಕಾರಿನ ಬದಿಗಳಲ್ಲಿ ಹಾಗೂ ಮೇಲೆ ನ್ಯೂಸ್ ವೆಬ್ ಸೈಟ್‌ಗಳ ತಲೆ ಬರಹಗಳನ್ನು ಅಂಟಿಸಲಾಗಿತ್ತು. ಆ ತಲೆ ಬರಹಗಳು ಸಮ-ಬೆಸ ನಿಯಮದ ಕುರಿತು ಧನಾತ್ಮಕವಾಗಿ ಹೇಳದ ಸುದ್ದಿಗಳದಾಗಿದ್ದವು.
ಸಮ-ಬೆಸದಿಂದ ದಿಲ್ಲಿಯ ವಾಯು ಮಾಲಿನ್ಯದ ಮೇಲೆ ಪರಿಣಾಮದ ಅಂಕಿ-ಅಂಶವಿಲ್ಲ: ಮಾಲಿನ್ಯ ನಿಯಂತ್ರಣ ಮಂಡಳಿ, ಸಮ-ಬೆಸ ಸೂತ್ರ: ಗಾಳಿಯನ್ನು ಶುದ್ಧ ಮಾಡಿಲ್ಲ, ರೂ.2 ಸಾವಿರ ದಂಡ ಮಾತ್ರ ಖಚಿತ ಇತ್ಯಾದಿ ತಲೆ ಬರಹಗಳು ಅವುಗಳಲ್ಲಿದ್ದವು.
ಎಪ್ರಿಲ್ 18ರಂದು ಸಮ-ಬೆಸ ನಿಯಮ ಉಲ್ಲಂಘಿಸಿದುದಕ್ಕಾಗಿ ಗೋಯಲ್‌ರಿಗೆ ರೂ.2 ಸಾವಿರ ಹಾಗೂ ಪರವಾನಿಗೆ-ವಿಮಾ ದಾಖಲೆ ಇಲ್ಲದುದಕ್ಕಾಗಿ ರೂ.1,500 ದಂಡ ವಿಧಸಲಾಗಿತ್ತು. ಆದರೆ, ಬುಧವಾರ ಅವರು ನಿಯಮ ಪಾಲಿಸಿದ್ದರು.





