ಮೇನಲ್ಲಿ ಮಹಾರಾಷ್ಟ್ರದಲ್ಲಿ ಐಪಿಎಲ್ ಪಂದ್ಯಗಳಿಲ್ಲ ಸುಪ್ರೀಂ ನಿರ್ದೇಶನ

ಹೊಸದಿಲ್ಲಿ, ಎ.27: ಮೇ 1ರಂದು ಪುಣೆಯಲ್ಲಿ ಒಂದು ಪಂದ್ಯವನ್ನು ಹೊರತುಪಡಿಸಿ, ಮಹಾರಾಷ್ಟ್ರದಲ್ಲಿ ಮೇ ತಿಂಗಳಲ್ಲಿ ಯಾವುದೇ ಐಪಿಎಲ್ ಪಂದ್ಯ ನಡೆಸುವಂತಿಲ್ಲವೆಂದು ಸುಪ್ರೀಂಕೋರ್ಟ್ ಇಂದು ನಿರ್ದೇಶನ ನೀಡಿದೆ.
ರಾಜ್ಯದಲ್ಲಿ ಹಲವು ದಶಕಗಳಲ್ಲೇ ಅತ್ಯಂತ ತೀವ್ರವಾದ ಬರ ಆವರಿಸಿರುವುದರಿಂದ ಪಂದ್ಯಗಳನ್ನು ರಾಜ್ಯದಿಂದ ಹೊರಗೆ ವರ್ಗಾಯಿಸಬೇಕೆಂಬ ಹಿಂದಿನ ತೀರ್ಪೊಂದನ್ನು ಅದು ಎತ್ತಿ ಹಿಡಿದಿದೆ.
ಪಂದ್ಯಗಳು ನಿಗದಿಯಾಗಿರುವ ಮಹಾರಾಷ್ಟ್ರದ ಮೂರು ನಗರಗಳಾದ ನಾಗಪುರ, ಪುಣೆ ಹಾಗೂ ಮುಂಬೈ ತೀವ್ರ ನೀರಿನ ಅಭಾವವನ್ನು ಎದುರಿಸುತ್ತಿವೆ. ಆದುದರಿಂದ ದೇಶೀಯ ಟಿ-20 ಪಂದ್ಯಗಳಿಗೆ ಪಿಚ್‌ಗಳನ್ನು ಸಿದ್ಧಗೊಳಿಸಲು ನೀರನ್ನು ಪೋಲು ಮಾಡಬಾರದೆಂದು ಇತ್ತೀಚೆಗೆ ಬಾಂಬೆ ಹೈಕೋರ್ಟ್ ಹೇಳಿತ್ತು.
ವಿವಿಧ ಕ್ರಿಕೆಟ್ ಮಂಡಳಿಗಳು ಸೇರಿದಂತೆ ಸಂಘಟಕರು ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಪಿಚ್ ನಿರ್ಮಾಣಕ್ಕೆ ತಾವು ಕುಡಿಯುವ ನೀರನ್ನು ಉಪಯೋಗಿಸುವುದಿಲ್ಲ. ಶುದ್ಧೀಕರಿಸಿದ ಚರಂಡಿ ನೀರನ್ನು ಬಳಸುತ್ತೇವೆಂದು ಅವರು ವಾದಿಸಿದ್ದರು. ಪಿಚ್‌ಗಳಿಗೆ ಬಳಸಿದ ನೀರಿಗೆ ಪರಿಹಾರವಾಗಿ ಬರಗಾಲ ಪೀಡಿತ ಪ್ರದೇಶಗಳಿಗೆ 60 ಲಕ್ಷ ಲೀಟರ್ ಶುದ್ಧೀಕರಿಸುವ ಕೊಳಚೆ ನೀರನ್ನು ಕೊಡುಗೆ ನೀಡುವೆವೆಂದು ಸಂಘಟಕರು ತಿಳಿಸಿದ್ದರು.
ಆದರೆ, ಸ್ಟೇಡಿಯಂಗಳಿಗೆ ಶುದ್ಧೀಕರಿಸಿದ ಕೊಳಚೆ ನೀರು ನೀಡುವ ವಿವಾದದಲ್ಲೇಕೆ ಸಿಲುಕ ಬೇಕು? ನೀರನ್ನು ವಿಂಗಡಿಸುವುದು ಹೇಗೆ? ಪಂದ್ಯಗಳಿಗೆ ಲಕ್ಷಾಂತರ ವೀಕ್ಷಕರು ಬರುತ್ತಾರೆ. ಅವರಿಗೆ ನೀರು ಕೊಡುವುದು ಎಲ್ಲಿಂದ ಎಂದು ಇಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ಸಂಘಟಕರು ಸುಮಾರು 12 ಪಂದ್ಯಗಳನ್ನು ರಾಜಸ್ಥಾನಕ್ಕೆ ಸ್ಥಳಾಂತರಿಸುವುದನ್ನೂ ಪರಿಶೀಲಿಸಿದ್ದರು. ಅದನ್ನು ಪ್ರಶ್ನಿಸಿ ಅಲ್ಲಿನ ನ್ಯಾಯಾಲಯವೊಂದರಲ್ಲಿ ದೂರು ದಾಖಲಾಗಿದೆ. ಮರುಭೂಮಿ ರಾಜ್ಯದಲ್ಲಿ ನೀರಿನ ತೀವ್ರ ಬಿಕ್ಕಟ್ಟಿದೆ. ಜೈಪುರದಂತಹ ನಗರಗಳನ್ನು ಭಾರೀ ಜನಪ್ರಿಯ ಕ್ರಿಕೆಟ್ ಟೂರ್ನಮೆಂಟ್‌ಗೆ ನಿಷೇಧಿತ ವಲಯಗಳೆಂದು ಘೋಷಿಸಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ. ರಾಜಸ್ಥಾನ ಹೈಕೋರ್ಟ್ ಮೇ 3ರಂದು ತೀರ್ಪು ಘೋಷಿಸುವೆನೆಂದು ಹೇಳಿದೆ.







