ಸಿಇಟಿಗೂ ಮೊದಲೇ ದ್ವಿತೀಯ ಪಿಯು ಫಲಿತಾಂಶ

ಬೆಂಗಳೂರು, ಎ.27: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತ್ತಿಪರ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶಕ್ಕೆ ಮೊದಲೇ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದ ತನ್ನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದವಿ ಪೂರ್ವ ಶಿಕ್ಷಣ ಮಂಡಳಿಯಲ್ಲಿನ ಆಡಳಿತ ಶಾಖೆ ಹಾಗೂ ಪರೀಕ್ಷಾ ವಿಭಾಗಗಳನ್ನು ಪ್ರತ್ಯೇಕಗೊಳಿಸುವ ಚಿಂತನೆ ನಡೆದಿದ್ದು, ಈ ಬಗ್ಗೆ ಇಲಾಖಾ ಮುಖ್ಯಸ್ಥರಿಗೆ ವರದಿ ನೀಡುವಂತೆ ಕೋರಲಾಗಿದೆ ಎಂದರು.
ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ಸರಕಾರದ ಚಿಂತನೆಯಲ್ಲಿದೆ. ಇದರ ಸಾಧಕ-ಬಾಧಕಗಳ ಬಗ್ಗೆ ತಿಳಿಯಲು ಸಮಿತಿ ರಚಿಸಿ ಸಮಿತಿ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಮಾಹಿತಿ ನೀಡಿದರು.
ಪ್ರಸ್ತುತ ಶೈಕ್ಷಣಿಕ ವರ್ಷ 12,200 ಮಂದಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ 17 ಸಾವಿರ ಮಂದಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು. ಈ ಸಂಬಂಧ ಇಲಾಖೆ ಈಗಾಗಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಅವರು ವಿವರ ನೀಡಿದರು.
ರಾಜ್ಯದಲ್ಲಿ ಕಡ್ಡಾಯ ಶಿಕ್ಷಣ ಕಾಯ್ದೆ ಅನ್ವಯ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸರಕಾರ ನಿಗದಿಪಡಿಸಿರುವ ಸೀಟುಗಳ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಸುಮಾರು 337 ಶಾಲೆಗಳಿಗೆ ಪ್ರವೇಶ ಕೋರಿ ವಿದ್ಯಾರ್ಥಿಗಳು ಅರ್ಜಿಗಳನ್ನು ಹಾಕಿಲ್ಲ. ಇದರಿಂದ 1,300 ಸೀಟುಗಳು ಲಭ್ಯವಾಗದೆ ಹಾಗೆ ಉಳಿದಿವೆ. ಬರುವ ಶೈಕ್ಷಣಿಕ ವರ್ಷದಲ್ಲಿ ಶಾಲಾ ಮಕ್ಕಳಿಗೆ ಸರಿಯಾದ ಸಮಯಕ್ಕೆ ಪಠ್ಯಪುಸ್ತಕ, ಸಮವಸ್ತ್ರ, ಬೂಟ್ಸ್, ಕಾಲುಚೀಲಗಳನ್ನು ವಿತರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಮಂಡಳಿಯಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈ ವಿಷಯ ತನಿಖಾ ಹಂತದಲಿದ್ದು ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದ್ವಿತೀಯ ಪಿಯುಸಿ ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯೇತರ ಪ್ರಶ್ನೆಗಳು ಇವೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ ಎಂದ ಅವರು, ಮುಖ್ಯ ಮೌಲ್ಯಮಾಪಕರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಒಂದು ವೇಳೆ ಪಠ್ಯೇತರ ಪ್ರಶ್ನೆಗಳು ಇದ್ದಲ್ಲಿ ಗ್ರೇಸ್ ಮಾರ್ಕ್ಸ್ ನೀಡಬೇಕೇ-ಬೇಡವೇ ಎಂದು ತೀರ್ಮಾನಿಸಲಿದ್ದಾರೆಂದು ಸ್ಪಷ್ಟಣೆ ನೀಡಿದರು.







