ನೌರ್: ಇರಾನ್ ನಿರಾಶ್ರಿತ ಆತ್ಮಾಹುತಿ
*ವಿಶ್ವಸಂಸ್ಥೆ ಅಧಿಕಾರಿಗಳ ಭೇಟಿ ವೇಳೆ ನಡೆದ ಘಟನೆ
*ಇತರ ನಾಲ್ವರಿಂದ ಆತ್ಮಹತ್ಯೆಗೆ ಯತ್ನ
ಸಿಡ್ನಿ, ಎ. 27: ನೌರು ದ್ವೀಪ ದೇಶದಲ್ಲಿರುವ ನಿರಾಶ್ರಿತ ಶಿಬಿರಕ್ಕೆ ವಿಶ್ವಸಂಸ್ಥೆಯ ಅಧಿಕಾರಿಗಳು ಇಂದು ಭೇಟಿ ನೀಡಿದಾಗ ಇರಾನ್‌ನ ನಿರಾಶ್ರಿತನೊಬ್ಬ ಬೆಂಕಿ ಹಚ್ಚಿಕೊಂಡನು ಹಾಗೂ ಇತರ ನಾಲ್ವರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರು ಎಂದು ಆಸ್ಟ್ರೇಲಿಯ ತಿಳಿಸಿದೆ.
23 ವರ್ಷದ ಯುವಕನನ್ನು ಪೆಸಿಫಿಕ್ ದ್ವೀಪ ದೇಶದಿಂದ ಆಸ್ಟ್ರೇಲಿಯದ ಆಸ್ಪತ್ರೆಗೆ ಕೊಂಡೊಯ್ಯಲಾಗುವುದು ಎಂದು ಆಸ್ಟ್ರೇಲಿಯದ ವಲಸೆ ಸಚಿವ ಪೀಟರ್ ಡಟನ್ ಹೇಳಿದರು. ಆದರೆ, ಆತ ಚೇತರಿಸಿಕೊಂಡು ಬದುಕುಳಿದರೆ ವಾಪಸ್ ಕಳುಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
‘‘23 ವರ್ಷದ ಇರಾನ್ ಪ್ರಜೆಯೊಬ್ಬ ದೋಣಿಯಲ್ಲಿ ನೌರುವಿಗೆ ಬಂದಿದ್ದಾನೆ. ಆತ ನೌರುವಿನಲ್ಲಿ ಬಂಧನ ಕೇಂದ್ರದ ಹೊರಗಿದ್ದನು. ಆತ ಇಂದು ಬೆಳಗ್ಗೆ ಸ್ವತಃ ಬೆಂಕಿ ಹಚ್ಚಿ ಕೊಂಡು ಆತ್ಮಾಹುತಿ ಮಾಡಿಕೊಂಡನು’’ ಎಂದು ಸಚಿವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘‘ಆತನ ಸ್ಥಿತಿ ತುಂಬಾ ಗಂಭೀರವಾಗಿದೆ. ಆತನನ್ನು ಇಂದು ರಾತ್ರಿ ಆಸ್ಟ್ರೇಲಿಯಕ್ಕೆ ಚಿಕಿತ್ಸೆಗಾಗಿ ವಿಮಾನದಲ್ಲಿ ಕೊಂಡೊಯ್ಯುವ ಯೋಜನೆಯನ್ನು ರೂಪಿಸಲಾಗಿದೆ. ಆದರೆ, ಆತನ ಪರಿಸ್ಥಿತಿ ತೀರಾ ಚಿಂತಾಜನಕವಾಗಿದೆ’’ ಎಂದರು.
ಆಶ್ರಯ ಕೋರಿ ದೋಣಿಯ ಮೂಲಕ ಆಸ್ಟ್ರೇಲಿಯ ಪ್ರವೇಶಿಸುವ ನಿರಾಶ್ರಿತರನ್ನು ಆಸ್ಟ್ರೇಲಿಯ ಪಪುವ ನ್ಯೂ ಗಿನಿ ಅಥವಾ ನೌರು ದೇಶಗಳಲ್ಲಿರುವ ತನ್ನ ನಿರಾಶ್ರಿತ ಸಂಸ್ಕರಣೆ ಕೇಂದ್ರಗಳಿಗೆ ಕಳುಹಿಸುತ್ತದೆ ಹಾಗೂ ಅವರಿಗೆ ಆಸ್ಟ್ರೇಲಿಯಲ್ಲಿ ನೆಲೆಸುವ ಯಾವುದೇ ಅವಕಾಶವೂ ಲಭಿಸುವುದಿಲ್ಲ.
ಆಸ್ಟ್ರೇಲಿಯದ ಈ ನೀತಿಯನ್ನು ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಟೀಕಿಸಲಾಗಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯ ನೌರುವಿನಲ್ಲಿರುವ ಪ್ರಾದೇಶಿಕ ಸಂಸ್ಕರಣೆ ಕೇಂದ್ರವನ್ನು ‘‘ಮುಕ್ತ ಕೇಂದ್ರ’’ವನ್ನಾಗಿ ಮಾಡಿದೆ. ಆ ಮೂಲಕ ಅದರ ವಾಸಿಗಳಿಗೆ ತಿರುಗಾಟದ ಸ್ವಾತಂತ್ರವನ್ನು ನೀಡಲಾಗಿದೆ.
ಇತರ ನಾಲ್ವರು ನಿರಾಶ್ರಿತರು ಮಂಗಳವಾರ ಸಂಜೆ ಬಟ್ಟೆ ಒಗೆಯುವ ಪುಡಿಯನ್ನು ತಿಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರು ಎಂದು ನಿರಾಶ್ರಿತ ಕ್ರಿಯಾ ಒಕ್ಕೂಟ ಹೇಳಿದೆ. ಅವರಿಗೆ ದ್ವೀಪದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ಆಶ್ರಯ ಕೋರಿ ಬರುವವರಿಗೆ ತನ್ನ ನೆಲದಲ್ಲಿ ನೆಲಸಲು ಆಸ್ಟ್ರೇಲಿಯ ಅವಕಾಶ ನಿರಾಕರಿಸಿದೆ.
ಪಪುವ ನ್ಯೂ ಗಿನಿ ಸಂಸ್ಕರಣೆ ಕೇಂದ್ರ ಮುಚ್ಚಲು ಆದೇಶ
ಸಿಡ್ನಿ, ಎ. 27: ತನ್ನಲ್ಲಿರುವ ಆಸ್ಟ್ರೇಲಿಯದ ನಿರಾಶ್ರಿತರ ಸಂಸ್ಕರಣೆ ಕೇಂದ್ರವನ್ನು ಮುಚ್ಚುವಂತೆ ಪಪುವ ನ್ಯೂ ಗಿನಿ ಬುಧವಾರ ಆದೇಶ ನೀಡಿದ್ದು, ಅಲ್ಲಿರುವ ನೂರಾರು ನಿರಾಶ್ರಿತರ ಭವಿಷ್ಯ ತೂಗುಯ್ಯಿಲೆಯಲ್ಲಿದೆ.
ಆಸ್ಟ್ರೇಲಿಯದ ಹಣಕಾಸು ನೆರವಿನಿಂದ ಮನುಸ್ ದ್ವೀಪದಲ್ಲಿ ನಡೆಸಲಾಗುತ್ತಿರುವ ನಿರಾಶ್ರಿತರ ಸಂಸ್ಕರಣೆ ಕೇಂದ್ರದಲ್ಲಿ ಜನರನ್ನು ಕೂಡಿ ಹಾಕುವುದು ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಈ ಕೇಂದ್ರವನ್ನು ಮುಚ್ಚುವ ನಿರ್ಧಾರವನ್ನು ಪಪುವ ನ್ಯೂ ಗಿನಿ ಸರಕಾರ ತೆಗೆದುಕೊಂಡಿದೆ.
‘‘ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ, ಪ್ರಾದೇಶಿಕ ಸಂಸ್ಕರಣೆ ಕೇಂದ್ರವನ್ನು ಮುಚ್ಚುತ್ತಿದ್ದು ಅಲ್ಲಿರುವ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಪಪುವ ನ್ಯೂ ಗಿನಿ ಆಸ್ಟ್ರೇಲಿಯವನ್ನು ಕೋರಲಿದೆ’’ ಎಂದು ಪ್ರಧಾನಿ ಪೀಟರ್ ಒನೀಲ್ ಹೇಳಿದರು.







