ಉತ್ತರ ಕೊರಿಯ ವಿರುದ್ಧ ಇತರ ಆಯ್ಕೆಗಳ ಪರಿಶೀಲನೆ: ಅಮೆರಿಕ ಎಚ್ಚರಿಕೆ
ವಾಶಿಂಗ್ಟನ್, ಎ. 27: ಉತ್ತರ ಕೊರಿಯ ಪರಮಾಣು ಮತ್ತು ಪ್ರಕ್ಷೇಪಕ ಕ್ಷಿಪಣಿಗಳ ಪರೀಕ್ಷೆಯನ್ನು ಮುಂದುವರಿಸಿದರೆ ತಾನು ಇತರ ಆಯ್ಕೆಗಳನ್ನು ಪರಿಶೀಲಿಸುವುದಾಗಿ ಅಮೆರಿಕ ಮಂಗಳವಾರ ಎಚ್ಚರಿಸಿದೆ. ಈ ‘ಆಯ್ಕೆ’ಗಳಲ್ಲಿ ಹೊಸ ದಿಗ್ಬಂಧನಗಳು ಅಥವಾ ಭದ್ರತಾ ಕ್ರಮಗಳು ಒಳಗೊಂಡಿರಬಹುದು ಎಂದು ಅದು ಹೇಳಿದೆ.
ಮಧ್ಯಮ ವ್ಯಾಪ್ತಿಯ ಪ್ರಕ್ಷೇಪಕ ಕ್ಷಿಪಣಿಯೊಂದರ ಪರೀಕ್ಷಾ ಹಾರಾಟಕ್ಕೆ ಉತ್ತರ ಕೊರಿಯ ಸಿದ್ಧತೆ ನಡೆಸಿರುವಂತೆ ಕಂಡುಬರುತ್ತಿದೆ ಎಂಬುದಾಗಿ ದಕ್ಷಿಣ ಕೊರಿಯದ ಯೊನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದ ಬಳಿಕ ಅಮೆರಿಕ ಈ ಎಚ್ಚರಿಕೆ ನೀಡಿದೆ.
ಉತ್ತರ ಕೊರಿಯವು ಶೀಘ್ರದಲ್ಲೇ ತನ್ನ ಐದನೆ ಪರಮಾಣು ಪರೀಕ್ಷೆಯನ್ನು ನಡೆಸುವ ಎಲ್ಲ ಸಾಧ್ಯತೆಗಳು ಇವೆ ಎಂಬುದಾಗಿ ವ್ಯಾಪಕವಾಗಿ ನಿರೀಕ್ಷಿಸಲಾಗಿದೆ. ಮೇ ತಿಂಗಳ ಆದಿ ಭಾಗದಲ್ಲಿ ನಡೆಯಲಿರುವ ಆಡಳಿತಾರೂಢ ವರ್ಕರ್ಸ್ ಪಾರ್ಟಿಯ ಸಮಾವೇಶಕ್ಕೆ ಮುಂಚಿತವಾಗಿಯೇ ಈ ಪರೀಕ್ಷೆ ನಡೆದರೂ ಅಚ್ಚರಿಯಿಲ್ಲವೆನ್ನಲಾಗಿದೆ.
ಉತ್ತರ ಕೊರಿಯದ ಸಂಭಾವ್ಯ ಬೆದರಿಕೆಗಳಿಂದ ತನ್ನನ್ನು ಹಾಗೂ ತನ್ನ ಮಿತ್ರಪಕ್ಷಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಮೆರಿಕ ಕಾರ್ಯನಿರತವಾಗಿದೆ ಎಂದು ಅಧ್ಯಕ್ಷ ಬರಾಕ್ ಒಬಾಮ ಸಿಬಿಎಸ್ ಸುದ್ದಿ ಚಾನೆಲ್‌ಗೆ ಮಂಗಳವಾರ ನೀಡಿದ ಸಂದರ್ಶನದಲ್ಲಿ ಹೇಳಿದರು.
ಉತ್ತರ ಕೊರಿಯವು ‘‘ಬೇಜವಾಬ್ದಾರಿಯುತ’’ ನಾಯಕನನ್ನೊಳಗೊಂಡ ‘‘ವಿಕ್ಷಿಪ್ತ’’ ದೇಶವಾಗಿದೆ ಎಂದು ಅವರು ಬಣ್ಣಿಸಿದರು.





