ಎರಡೇ ತಿಂಗಳಲ್ಲಿ 2 ಲಕ್ಷ ಚ.ಅಡಿ ನಿರ್ಮಾಣ !
ಕೆಇಎಫ್ ಇನ್‌ಫ್ರಾ ಹೊಸ ಸಾಧನೆ
13.5 ತಿಂಗಳಲ್ಲಿ 15ಲಕ್ಷ ಚ.ಅಡಿಯ ಎಂಬಸಿ 7ಬಿ ಪೂರ್ಣಗೊಳಿಸುವ ಯೋಜನೆ
ಬೆಂಗಳೂರು, ಎ. 28: ಅನಿವಾಸಿ ಭಾರತೀಯ ಉದ್ಯಮಿ ಫೈಝಲ್ ಕೊಟ್ಟಿಕೊಲ್ಲನ್ ಅವರ ನೇತೃತ್ವದ ಬಹುರಾಷ್ಟ್ರೀಯ ಕಂಪೆನಿ ಕೆಇಎಫ್ ಹೋಲ್ಡಿಂಗ್ಸ್ ನ ಅಧೀನದ ಪ್ರಿಕಾಸ್ಟ್ ನಿರ್ಮಾಣ ತಂತ್ರಜ್ಞಾನ ಸಂಸ್ಥೆ ಕೆಇಎಫ್ ಇನ್‌ಫ್ರಾ , ದೇಶದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪೆನಿ ಎಂಬಸಿ ಗ್ರೂಪ್ ಜೊತೆ ಬೆಂಗಳೂರಿನಲ್ಲಿ ಏಶ್ಯಾ ಖಂಡದ ಪ್ರಪ್ರಥಮ ಸಂಪೂರ್ಣ ಪ್ರಿಕಾಸ್ಟ್ ತಂತ್ರಜ್ಞಾನದಲ್ಲಿ ನಿರ್ಮಿತ ವಾಣಿಜ್ಯ ಸಂಕೀರ್ಣ ಎಂಬಸಿ 7ಬಿ ಯೋಜನೆಯ ಪ್ರಥಮ ಹಂತದ ನಿರ್ಮಾಣವನ್ನು ಪೂರ್ಣಗೊಳಿಸಿದೆ ಎಂದು ಕೆಇಎಫ್ ಇನ್‌ಫ್ರಾದ ಸಿಇಒ ಸುಮೇಶ್ ಸಾಚಾರ್ ತಿಳಿಸಿದ್ದಾರೆ.
ಕೇವಲ ಎರಡೇ ತಿಂಗಳಲ್ಲೆ 2.06 ಲಕ್ಷ ಚದರ ಅಡಿ ವಿಸ್ತೀರ್ಣದ ನೆಲಮಹಡಿಯ ಎರಡು ಮಳಿಗೆಗಳ ನಿರ್ಮಾಣ ಪೂರ್ಣಗಿಳಿಸಲಾಗಿದೆ. ಸಾಂಪ್ರಾಯಿಕ ನಿರ್ಮಾಣ ವಿಧಾನದಲ್ಲಿ ಈ ನಿರ್ಮಾಣಕ್ಕೆ ಕನಿಷ್ಟ 6 ತಿಂಗಳು ಬೇಕಾಗುತ್ತದೆ . ಒಟ್ಟು 375 ಕೋಟಿ ರೂ.ಗಳ 15 ಲಕ್ಷ ಚದರ ಅಡಿ ವಿಸ್ತೀರ್ಣದ ಈ ವಾಣಿಜ್ಯ ಸಂಕೀರ್ಣದ ನಿರ್ಮಾಣವನ್ನು ದಾಖಲೆಯ ಕೇವಲ 13.5 ತಿಂಗಳಲ್ಲಿ ಮುಗಿಸಲಾಗುತ್ತದೆ ಎಂದು ಸುಮೇಶ್ ಹೇಳಿದ್ದಾರೆ.
ಉದ್ದೇಶಿತ ಕಟ್ಟಡದಲ್ಲಿ ಹತ್ತು ಮಹಡಿಗಳ ಕಚೇರಿ ಸ್ಥಳಾವಕಾಶ, ವಿಶಾಲವಾದ ನೆಲಮಹಡಿ, ಬಹುಹಂತದ ಕಾರ್ ಪಾರ್ಕಿಂಗ್ ಸೌಲಭ್ಯವಿದೆ. ಯುರೋಪ್‌ನಲ್ಲಿ ಬಳಸುವ ಎರಡು ಗೋಡೆ(ಡಬಲ್ ವಾಲ್) ತಂತ್ರಜ್ಞಾನವನ್ನು ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಕೆಇಎಫ್ ಇನ್‌ಫ್ರಾ ಈ ಯೋಜನೆಯಲ್ಲಿ ಪರಿಚಯಿಸಿದೆ. ಇದರಿಂದ ಶೇ.50ರಷ್ಟು ಸಮಯದ ಉಳಿತಾಯವಾಗುವುದರ ಜೊತೆಗೆ ಕಟ್ಟಡದ ಗುಣಮಟ್ಟ ಮತ್ತು ಸ್ಥಿರತೆಯೂ ಹೆಚ್ಚಾಗಲಿದೆ ಎಂದು ಸುಮೇಶ್ ಹೇಳಿದರು.
ಕೃಷ್ಣಗಿರಿಯಲ್ಲಿರುವ ಕೆಇಎಫ್ ಇನ್‌ಫ್ರಾದ ವಿಶ್ವದಲ್ಲೇ ಅತ್ಯಂತ ದೊಡ್ಡ ಸಮಗ್ರ ಪ್ರಿಕಾಸ್ಟ್ ನಿರ್ಮಾಣ ತಂತ್ರಜ್ಞಾನ ಕಾರ್ಖಾನೆಯಲ್ಲಿ ರೊಬೋಟಿಕ್ಸ್ ಸಹಿತ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಟ್ಟಡವೊಂದಕ್ಕೆ ಬೇಕಾಗುವ ಪ್ರತಿಯೊಂದು ಭಾಗವನ್ನು ಸಿದ್ಧಗೊಳಿಸಲಾಗುತ್ತದೆ.
ಸಂಪೂರ್ಣ ವಿಶ್ವಾಸ: ಕೆಇಎಫ್ ಇನ್‌ಫ್ರಾ ಸಂಸ್ಥೆಯು ಕಟ್ಟಡ ನಿರ್ಮಾಣಕ್ಕೆ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದೆ. ಆ ಹಿನ್ನೆಲೆಯಲ್ಲಿ ಆ ಸಂಸ್ಥೆಯೊಂದಿಗೆ ಎಂಬೆಸಿ 7ಬಿ ಕಟ್ಟಡ ನಿರ್ಮಾಣಕ್ಕೆ ಸಹಭಾಗಿತ್ವ ಹೊಂದಿದ್ದು, ಸಂಸ್ಥೆಯ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದು ಎಂಬೆಸಿಯ ಸಿಇಓ ಮೈಕ್ ಹೋಲ್ಯಾಂಡ್ ನುಡಿದರು.
ಇದೇ ವೇಳೆ ಮಾತನಾಡಿದ ಕೆಇಎಫ್ ಇನ್‌ಫ್ರಾ ಇಂಡಸ್ಟ್ರಿಯಲ್ ಪಾರ್ಕ್‌ನ ಪ್ರಧಾನ ವ್ಯವಸ್ಥಾಪಕ ಆ್ಯಂಡ್ರೆ ಡೀನ್ಸ್ಪ್, ಗ್ರಾಹಕರಿಗೆ ಕಟ್ಟಡ ನಿರ್ಮಾಣದ ಸಮಯ ಮತ್ತು ವೆಚ್ಚವನ್ನು ತಗ್ಗಿಸಿ, ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.













