50 ಸರಕಾರಿ, ಅನುದಾನಿತ ಶಾಲೆಗಳಿಗೆ ಸೌರಶಕ್ತಿ ಘಟಕ: ಶಾಸಕ ಐವನ್
ಮಂಗಳೂರು, ಎ. 28: ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 50 ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೌರ ಶಕ್ತಿ ಮೇಲ್ಛಾವಣಿ ಘಟಕವನ್ನು ಅಳವಡಿಸಲು ತೀರ್ಮಾನಿಸಿರುವುದಾಗಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಇಂದಿಲ್ಲಿ ತಿಳಿಸಿದ್ದಾರೆ.
ಪಾಲಿಕೆಯ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಥಮ ಹತಂದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರ ಮಟ್ಟದ 5 ಶಾಲೆಗಳಿಗೆ ಅಳವಡಿಸಲು ತೀರ್ಮಾನಿಸಲಾಗಿದೆ. ಪ್ರತಿ ಘಟಕದ ವೆಚ್ಚ 2.5 ಲಕ್ಷ ರೂ. ಅಂದಾಜಿಸಲಾಗಿದ್ದು, ಒಟ್ಟು 50 ಘಟಕಗಳಿಗೆ 1.25 ಕೋಟಿ ರೂ. ವೆಚ್ಚವಾಗಲಿದೆ. ಈ ವೆಚ್ಚವು ತನ್ನ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಅನುದಾನದಿಂದ ಮತ್ತು ಜಿಲ್ಲೆಯ ವಿವಿಧ ಉದ್ದಿಮೆದಾರರಿಂದ ನೆರವು ಪಡೆಯಲಾಗುವುದು ಎಂದರು.
ಪ್ರತಿ ಶಾಲೆಗೆ ಅಳವಡಿಸಲಾಗುವ ಸೌರ ಶಕ್ತಿ ಮೇಲ್ಛಾವಣಿ ಘಟಕವು 3 ಕಿ.ವ್ಯಾಟ್ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ 12 ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಪ್ರತಿ ದಿನ 12 ಯೂನಿಟ್‌ನಂತೆ ತಿಂಗಳಿಗೆ 360 ಯೂನಿಟ್ ವಿದ್ಯುತ್ ಉತ್ದಾನೆಯಾಗುತ್ತದೆ. ಪ್ರಸ್ತುತ ಮೆಸ್ಕಾಂ ದರದ ಪ್ರಕಾರ 9.56 ರೂ.ನಂತೆ ತಿಂಗಳೊಂದಕ್ಕೆ 3,441.60 ರಂತೆ ಆದಾಯ ಬರುತ್ತದೆ. ಈ ಆದಾಯದಿಂದ ಶಾಲೆಯಲ್ಲಿ ಬಳಕೆಯಾದ ವಿದ್ಯುತ್ ದರ ಕಳೆದು ಉಳಿತ ಮೊತ್ತದಿಂದ ಶಾಲೆಯ ಇತರ ಚಟುವಟಿಕೆಗಳಿಗೆ ಉಪಯೋಗಿಸಬುಹುದು. ಅಲ್ಲದೆ, ಹೆಚ್ಚುವರಿ ಲಾಭ ಬರುವ ಹಣದಿಂದ ಶಾಲೆಯ ವಿದ್ಯಾರ್ಥಿಗಳ ಆಟೋಟ ಪ್ಪರ್ಧೆಗಳಿಗೆ ಬೇಕಾಗುವ ಸಲಕರಣೆಗಳನ್ನು ಖರೀದಿಸಲು ಸೂಚಿಸಲಾಗುವುದು. ಶಾಲಾ ರಜಾ ದಿನಗಳಲ್ಲಿ ಉತ್ಪಾದಿಸಿದ ವಿದ್ಯುತ್ ನೇರವಾಗಿ ವಿದ್ಯುತ್ ನಿಗಮಕ್ಕೆ ನೀಡುವ ಮೂಲಕ ಆದಾಯವನ್ನು ಪಡೆದುಕೊಳ್ಳಬಹುದು ಎಂದು ಐವನ್ ಸಲಹೆ ನೀಡಿದರು.
ಎಂಡೊಸಲ್ಫಾನ್ ಪೀಡಿತರಾಗಿರುವ ಕುಟುಂಬಗಳಿಗೆ ತನ್ನ ನಿಧಿಯಿಂದ ಪ್ರತಿ ಕುಟುಂಬಕ್ಕೆ 2 ಲೈಟ್, ಒಂದು ಫ್ಯಾನ್ ಮತ್ತು ಮೊಬೈಲ್ ಚಾರ್ಜರ್ ಬಳಕೆಯಾಗುವಂತೆ ಸೌರ ಶಕ್ತಿ ಘಟಕವನ್ನು ಅವಳಡಿಸಲಾಗಿದೆ. ಎಂಡೊ ಪೀಡಿತರ ಒಟ್ಟು 40 ಮನೆಗಳಿಗೆ ಈ ಸೌರಶಕ್ತಿ ಘಟಕಗಳನ್ನು ಅಳವಡಿಸಲು ತೀರ್ಮಾನಿಸಿರುವುದಾಗಿ ತಿಳಿಸಿದ ಶಾಸಕರು, ಇದಕ್ಕಾಗಿ ತನ್ನ ಶಾಸಕ ನಿಧಿಯಿಂದ 5.36 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪೂರ್ಣ ಸೋಲಾರ್‌ಯುಕ್ತ ಜಿಲ್ಲೆಯನ್ನಾಗಿಸುವ ಮೂಲಕ ರಾಜ್ಯದಲ್ಲೇ ಮಾದರಿ ಜಿಲ್ಲೆಯಾಗಬೇಕೆಂಬ ಕನಸು ತನ್ನದಾಗಿದ್ದು, ಈ ಪ್ರಯತ್ನಕ್ಕೆ ತನ್ನ ಮನೆಯಲ್ಲೇ ಅಳವಡಿಸಿದ ಘಟಕದಿಂದ ಪ್ರಸ್ತುತ ತಿಂಗಳೊಂದಕ್ಕೆ 1,200 ಯೂನಿಟ್ ವಿದ್ಯುತ್ ಉತ್ಪಾದಿಸುತ್ತಿದ್ದು, ಈಗಿನ ಬಿಸಿಲಿಗೆ 1385 ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ನಿರೀಕ್ಷೆಗಿಂತಲೂ 185 ಯೂನಿಟ್ ಹೆಚ್ಚು ಉತ್ಪಾದಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯದಲ್ಲಿ ಸೌರಶಕ್ತಿ ಮೇಲ್ಛಾವಣಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿ ಹೊಸ ಸೌರಶಕ್ತಿ ನೀತಿ 2004-2011ಜಾರಿಗೊಳಿಸಿದ್ದು, 2018ರೊಳಗೆ 400 ಮೆಗಾ ವ್ಯಾಟ್ ಸಾಮರ್ಥ್ಯದ ಸೌರಶಕ್ತಿ ವಿದ್ಯುತ್ ಯೋಜನೆಯನ್ನು ಅನುಷ್ಠಾನಗೊಳಿಸುವ ಗುರಿ ಹೊಂದಲಾಗಿದೆ. ಅಲ್ಲದೆ, ಮೇಲ್ಛಾವಣಿ ಯೋಜನೆಗಳಿಗೆ ಬಳಸಲಾಗುವ ಸೌರ ಫಲಕ ಹಾಗೂ ಇನ್ವರ್ಟರ್‌ಗಳಿಗೆ ಸರಕಾರವು ವೌಲ್ಯವರ್ಧಿಕ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಪ್ಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಕಾರ್ಪೊರೇಟರ್ ನಾಗೇಂದ್ರ ಕುಮಾರ್, ಕಾರ್ಪೊರೇಟರ್ ಅಪ್ಪಿಲತಾ, ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಮುಹಮ್ಮದ್ ರಫೀಕ್, ಕಾರ್ಯದರ್ಶಿ ಹನೀಫ್, ಯೂತ್ ಕಾಂಗ್ರೆಸ್‌ನ ಚೇತನ್ ಮೊದಲಾದವರು ಉಪಸ್ಥಿತರಿದ್ದರು.





